ನಾಸಿಕ್: ನಗರದ ಕೋಚಿಂಗ್ ಕೇಂದ್ರವೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಆತನ ಇಬ್ಬರು ಸಹಪಾಠಿಗಳೇ ಹೊಡೆದು ಕೊಲೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ನಗರದ ಸತ್‌ಪುರದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಅಶೋಕನಗರ ನಿವಾಸಿ ಯಶರಾಜ್ ತುಕಾರಾಂ ಗಂಗುರ್ದೆ ಎಂಬುದಾಗಿ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
‘ಸೀಟುಗಳ ವ್ಯವಸ್ಥೆಗೆ ಸಂಬಂಧಿಸಿ ಶಾಲೆಯಲ್ಲಿ ಜುಲೈ 31ರಂದು ಈ ಇಬ್ಬರು ಸಹಪಾಠಿಗಳು ಹಾಗೂ ಗಂಗುರ್ದೆ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ, ಸಮಸ್ಯೆಯನ್ನು ಬಗೆಹರಿಸಲಾಗಿತ್ತು. ಕೋಚಿಂಗ್ ಕೇಂದ್ರದಲ್ಲಿ ಶನಿವಾರ ರಾತ್ರಿ ಭೇಟಿಯಾದ ವೇಳೆ, ಇದೇ ವಿಚಾರವಾಗಿ ಮತ್ತೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಇಬ್ಬರು ಸಹಪಾಠಿಗಳು, ಗಂಗುರ್ದೆಗೆ ಒದೆಯುವ ಜೊತೆಗೆ ಗುದ್ದಿದ್ದಾರೆ. ಆಗ ಕುಸಿದು ಬಿದ್ದಿದ್ದ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.