ADVERTISEMENT

ದೆಹಲಿಯಲ್ಲಿ ಸರ್ಕಾರವೆಂದರೆ ಲೆ.ಗವರ್ನರ್; ಎನ್‌ಸಿಟಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಪಿಟಿಐ
Published 29 ಮಾರ್ಚ್ 2021, 2:24 IST
Last Updated 29 ಮಾರ್ಚ್ 2021, 2:24 IST
ದೆಹಲಿ ಇಂಡಿಯಾ ಗೇಟ್‌ ಸಮೀಪ ಹೊಗೆ ಮಂಜು
ದೆಹಲಿ ಇಂಡಿಯಾ ಗೇಟ್‌ ಸಮೀಪ ಹೊಗೆ ಮಂಜು   

ನವದೆಹಲಿ: ದೆಹಲಿಯ ಚುನಾಯಿತ ಸರ್ಕಾರಕ್ಕಿಂತಲೂ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್‌ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡುವ 'ರಾಷ್ಟ್ರ ರಾಜಧಾನಿ ವಲಯ ದೆಹಲಿ ತಿದ್ದುಪಡಿ ಮಸೂದೆಗೆ(ಎನ್‌ಸಿಟಿ)' ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಂಕಿತ ಹಾಕಿದ್ದಾರೆ.

ಭಾನುವಾರ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸುವ ಮೂಲಕ ಎನ್‌ಸಿಟಿ ಮಸೂದೆ, 2021ಕ್ಕೆ ರಾಷ್ಟ್ರಪತಿ ಒಪ್ಪಿಗೆ ದೊರೆತಿರುವುದನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಈ ತಿದ್ದುಪಡಿ ಮಸೂದೆಯ ಪ್ರಕಾರ, ದೆಹಲಿಯಲ್ಲಿ 'ಸರ್ಕಾರ' ಎಂದರೆ 'ಲೆಫ್ಟಿನೆಂಟ್‌ ಗವರ್ನರ್‌' ಎಂಬುದನ್ನು ಸೂಚಿಸುತ್ತದೆ. ಇನ್ನು ಮುಂದೆ ಚುನಾಯಿತ ಸರ್ಕಾರವು ಯಾವುದೇ ಕಾರ್ಯಕಾರಿ ಕ್ರಮಗಳನ್ನು ಕೈಗೊಳ್ಳುವುದಕ್ಕೂ ಮುನ್ನ ಲೆಫ್ಟಿನೆಂಟ್‌ ಗವರ್ನರ್‌ ಅವರ ಸಲಹೆ ಪಡೆಯಬೇಕಾಗುತ್ತದೆ.

ADVERTISEMENT

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಎನ್‌ಸಿಟಿ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಮಾರ್ಚ್‌ 22ರಂದು ಹಾಗೂ ಮಾರ್ಚ್‌ 24ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗುತ್ತಿದ್ದಂತೆ ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರತಿಕ್ರಿಯಿಸಿ, 'ಭಾರತದ ಪ್ರಜಾಪ್ರಭುತ್ವಕ್ಕೆ ಕರಾಳ ದಿನ' ಎಂದಿದ್ದರು.

ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಅಧಿಕಾರದ ಜಟಾಪಟಿಯು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. 2018ರ ಜುಲೈನಲ್ಲಿ ಕೋರ್ಟ್‌ ನೀಡಿರುವ ಆದೇಶದ ಅನ್ವಯವೇ ಮಸೂದೆ ಇರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ತಿದ್ದುಪಡಿ ಮಸೂದೆಯಿಂದಾಗಿ ರಾಷ್ಟ್ರ ರಾಜಧಾನಿ ವಲಯದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆ ಸಿಗಲಿದೆ. ಮಸೂದೆಯಲ್ಲಿನ ದ್ವಂದ್ವಗಳನ್ನು ತೆಗೆಯುವ ನಿಟ್ಟಿನಲ್ಲಿ ತಿದ್ದುಪಡಿ ತರಲಾಗಿದೆ ಎಂದು ಕೇಂದ್ರ ಸಚಿವ ಜಿ.ಕಿಶನ್‌ ರೆಡ್ಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.