ಪ್ರಾತಿನಿಧಿಕ ಚಿತ್ರ
ಚಿತ್ರ ಕೃಪೆ– ಐಸ್ಟಾಕ್
ನವದೆಹಲಿ: ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳ ಪೈಕಿ ‘ಇಂದಿರಾ ಗಾಂಧಿ ಅತ್ಯುತ್ತಮ ಮೊದಲ ಸಿನಿಮಾ ಪ್ರಶಸ್ತಿ’ ಹಾಗೂ ‘ನರ್ಗೀಸ್ ದತ್ ಅತ್ಯುತ್ತಮ ರಾಷ್ಟ್ರೀಯ ಭಾವೈಕ್ಯ ಚಲನಚಿತ್ರ ಪ್ರಶಸ್ತಿ’ ಹೆಸರನ್ನು ಬದಲಾಯಿಸಲಾಗಿದೆ. ಈ ಎರಡು ಪ್ರಶಸ್ತಿಗಳಲ್ಲಿ ಇದ್ದ ‘ಇಂದಿರಾ ಗಾಂಧಿ’ ಮತ್ತು ‘ನರ್ಗೀಸ್ ದತ್’ ಹೆಸರು ಕೈಬಿಡಲಾಗಿದೆ.
‘70ನೇ ರಾಷ್ಟ್ರೀಯ ಸಿನಿಮಾ ಪುರಸ್ಕಾರ 2022’ಕ್ಕಾಗಿನ ನಿಯಮಗಳಿಗೆ ಅನುಗುಣವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರಚಿಸಿದ್ದ ಸಮಿತಿಯೊಂದರ ಶಿಫಾರಸು ಆಧರಿಸಿ ಈ ಬದಲಾವಣೆಗಳನ್ನು ತರಲಾಗಿದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಕೆಲವು ಪ್ರಶಸ್ತಿಗಳಿಗೆ ನೀಡುವ ನಗದು ಮೊತ್ತವನ್ನು ಹೆಚ್ಚಿಸಲಾಗಿದೆ, ಕೆಲವು ಪ್ರಶಸ್ತಿಗಳನ್ನು ವಿಲೀನಗೊಳಿಸಲಾಗಿದೆ.
ಬದಲಾವಣೆಗಳನ್ನು ತರುವ ತೀರ್ಮಾನವನ್ನು ಸರ್ವಸಮ್ಮತಿಯೊಂದಿಗೆ ಕೈಗೊಳ್ಳಲಾಗಿದೆ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದರು. ‘ಇಂದಿರಾ ಗಾಂಧಿ ಅತ್ಯುತ್ತಮ ಮೊದಲ ಸಿನಿಮಾ ಪ್ರಶಸ್ತಿ’ಯ ಹೆಸರನ್ನು ‘ನಿರ್ದೇಶಕರ ಅತ್ಯುತ್ತಮ ಮೊದಲ ಸಿನಿಮಾ’ ಎಂದು ಬದಲಿಸಲಾಗಿದೆ. ನಿರ್ದೇಶಕ ಮತ್ತು ನಿರ್ಮಾಪಕರ ನಡುವೆ ಹಂಚುತ್ತಿದ್ದ ಈ ಪ್ರಶಸ್ತಿ ಮೊತ್ತವನ್ನು ಇನ್ನು ಮುಂದೆ ನಿರ್ದೇಶಕರಿಗೆ ಮಾತ್ರವೇ ನೀಡಲಾಗುತ್ತದೆ.
‘ನರ್ಗೀಸ್ ದತ್ ಅತ್ಯುತ್ತಮ ರಾಷ್ಟ್ರೀಯ ಭಾವೈಕ್ಯ ಚಲನಚಿತ್ರ ಪ್ರಶಸ್ತಿ’ಯ ಹೆಸರನ್ನು ‘ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಸಿನಿಮಾ’ ಎಂದು ಬದಲಿಸಲಾಗಿದೆ. ಸಾಮಾಜಿಕ ಸಂಗತಿಗಳು, ಪರಿಸರ ಸಂರಕ್ಷಣೆಯ ವಿಭಾಗದ ಪ್ರಶಸ್ತಿಗಳನ್ನು ಇದರಲ್ಲಿ ವಿಲೀನಗೊಳಿಸಲಾಗಿದೆ.
ಪ್ರಶಸ್ತಿಗಳಲ್ಲಿ ಬದಲಾವಣೆ ತರುವಂತೆ ಶಿಫಾರಸು ಮಾಡಿದ್ದ ಸಮಿತಿಗೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೀರ್ಜಾ ಶೇಖರ್ ಅಧ್ಯಕ್ಷರಾಗಿದ್ದರು. ಸಂಗೀತ ನಿರ್ದೇಶನ ವಿಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಈ ವಿಭಾಗವನ್ನು ಇನ್ನು ‘ಅತ್ಯುತ್ತಮ ಹಿನ್ನೆಲೆ ಸಂಗೀತ’ ಎಂದು ಗುರುತಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.