ADVERTISEMENT

ಜುಲೈ 21ರಂದು ವಿಚಾರಣೆಗೆ ಹಾಜರಾಗುವಂತೆ ಸೋನಿಯಾಗೆ ಇ.ಡಿ ಸಮನ್ಸ್‌

ಪಿಟಿಐ
Published 11 ಜುಲೈ 2022, 13:11 IST
Last Updated 11 ಜುಲೈ 2022, 13:11 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ    

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜುಲೈ 21ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (75) ಅವರಿಗೆ ಸೂಚನೆ ನೀಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ ಅವರಿಗೆ ಇ.ಡಿ ಜೂನ್ 23 ರಂದು ಎರಡನೇ ಸಮನ್ಸ್ ನೀಡಿತ್ತು. ಆದರೆ ಕೋವಿಡ್‌ ಮತ್ತು ಶ್ವಾಸಕೋಶದ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಅವರು ವಿಶ್ರಾಂತಿಯ ಪಡೆಯಬೇಕಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಹೋಗಿರಲಿಲ್ಲ.

ಜೂನ್ 23ರ ಸಮನ್ಸ್ ಅನ್ನು ನಾಲ್ಕು ವಾರಗಳ ಕಾಲ ಮುಂದೂಡುವಂತೆ ಗಾಂಧಿ ಇ.ಡಿಯನ್ನು ಕೋರಿದ್ದರು. ಜುಲೈ 21 ರಂದು ತನಿಖೆಗೆ ಹಾಜರಾಗುವುದಾಗಿ ಹೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗೆ ಜೂನ್ 8 ರಂದು ಮೊದಲ ನೋಟಿಸ್ ನೀಡಲಾಗಿತ್ತು. ಆದರೆ ಅವರು ಕೋವಿಡ್‌ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ, ಜೂನ್ 23ಕ್ಕೆ ಎರಡನೇ ಸಮನ್ಸ್ ನೀಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಗ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಇ.ಡಿ ಈಗಾಗಲೇ ಐದು ದಿನಗಳ, 50 ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ಈ ತನಿಖೆಯು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವ ಹೊಂದಿರುವ ಕಾಂಗ್ರೆಸ್‌ನ ‘ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌’ನಲ್ಲಿನ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.