ADVERTISEMENT

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಇ.ಡಿ ಆರೋಪ ಪಟ್ಟಿ ತಿರಸ್ಕರಿಸಿದ ದೆಹಲಿ ಕೋರ್ಟ್‌

ಪಿಟಿಐ
Published 16 ಡಿಸೆಂಬರ್ 2025, 15:45 IST
Last Updated 16 ಡಿಸೆಂಬರ್ 2025, 15:45 IST
 Congress leaders Sonia Gandhi and Rahul Gandhi 
 Congress leaders Sonia Gandhi and Rahul Gandhi    

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿ ಇತರೆ ಐವರು ಆರೋಪಿಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ಡೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ದೆಹಲಿ ಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ. 

‘ಎಫ್‌ಐಆರ್ ಇಲ್ಲದೆ ಖಾಸಗಿ ದೂರಿನ ಆಧಾರದ ಮೇಲೆ ಸಲ್ಲಿಸಿರುವ ಆರೋಪ ಪಟ್ಟಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಕಾನೂನಿನಡಿ ಇದನ್ನು ಅನುಮತಿಸಲಾಗದು’ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಹೇಳಿದರು. 

‘ಈ ಪ್ರಕರಣದಲ್ಲಿ ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧಗಳ ತನಿಖಾ ವಿಭಾಗವು ಈಗಾಗಲೇ ಎಫ್‌ಐಆರ್‌ ದಾಖಲಿಸಿದೆ. ಹೀಗಿರುವಾಗ ಖಾಸಗಿ ವ್ಯಕ್ತಿಯೊಬ್ಬರ ದೂರಿನ ತನಿಖೆ ಆಧಾರದಲ್ಲಿ ಇ.ಡಿ ಸಲ್ಲಿಸಿರುವ ಆರೋಪ ಪಟ್ಟಿ ಪರಿಗಣಿಸುವುದು, ತೀರ್ಪು ನೀಡುವುದು ಅಪಕ್ವ ಎನಿಸುತ್ತದೆ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

ADVERTISEMENT

‘ಪಿಎಂಎಲ್‌ಎ ಸೆಕ್ಷನ್‌ 66(22)ರ ಅಡಿ ಲಭ್ಯವಿರುವ ಅಧಿಕಾರವನ್ನು ಬಳಸಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ದೆಹಲಿ ಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು’ ಎಂದು ಇ.ಡಿ ಹೇಳಿದೆ.  

ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ದಿವಂಗತ ಮೋತಿಲಾಲ್‌ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್‌, ಸುಮನ್‌ ದುಬೆ, ಸ್ಯಾಮ್‌ ಪಿತ್ರೋಡಾ ಸೇರಿ ಯಂಗ್‌ ಇಂಡಿಯನ್‌ ಕಂಪನಿ ಮೂಲಕ ಸಂಚು ರೂಪಿಸಿ ‘ನ್ಯಾಷನಲ್‌ ಹೆರಾಲ್ಡ್‌’ ಪತ್ರಿಕೆ ಪ್ರಕಟಿಸುತ್ತಿದ್ದ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ಗೆ (ಎಜೆಎಲ್‌) ಸೇರಿದ್ದ ಸುಮಾರು ₹2 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿತ್ತು.

ಯಂಗ್‌ ಇಂಡಿಯನ್‌ ಕಂಪನಿಯಲ್ಲಿ ಶೇ 76ರಷ್ಟು ಪಾಲನ್ನು ಗಾಂಧಿ ಕುಟುಂಬ ಹೊಂದಿದ್ದು, ₹90 ಕೋಟಿ ಸಾಲಕ್ಕೆ ಬದಲಾಗಿ ಎಜೆಎಲ್‌ನ ಆಸ್ತಿಯನ್ನು ಮೋಸದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಆರೋಪ ಪಟ್ಟಿ ಸಲ್ಲಿಸಿತ್ತು.

ರಾಜಕೀಯ ಬೇಟೆ ಸುಳ್ಳು ಪ್ರಚಾರ ಹೆಸರಿಗೆ ಕಳಂಕ ತರುವ ಆಧಾರ ರಹಿತ ಅಭಿಯಾನಕ್ಕೆ ಸೋಲಾಗಿದೆ. ಇಂತಹ ಬೆದರಿಕೆಗೆ ಮಣಿಯುವುದಿಲ್ಲ. ಸತ್ಯಕ್ಕಾಗಿ ಹೋರಾಟ ಮುಂದುವರಿಯಲಿದೆ 
–   ಸುಪ್ರಿಯಾ ಶ್ರೀನೇತ್‌ ಕಾಂಗ್ರೆಸ್‌ ವಕ್ತಾರೆ
ಮೋದಿ ಸರ್ಕಾರದ ಒತ್ತಡಕ್ಕೆ ಮಣಿದು ಇ.ಡಿ ಆರೋಪ ಪಟ್ಟಿ ಸಲ್ಲಿಸಿತ್ತು. ಕೋರ್ಟ್‌ ಇದನ್ನು ತಿರಸ್ಕರಿಸಿರುವುದು ಅಧಿಕಾರದ ವಿರುದ್ಧ ಸತ್ಯಕ್ಕೆ ಗೆಲುವು ಲಭಿಸಿದಂತಾಗಿದೆ
ಅಶೋಕ್ ಗೆಹಲೋತ್‌ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ

ಎಫ್‌ಐಆರ್‌ ಪ್ರತಿ ಕೊಡಲು ಸಾಧ್ಯವಿಲ್ಲ’

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಗಾಂಧಿ ಕುಟುಂಬಕ್ಕೆ ಪೊಲೀಸ್‌ ಎಫ್‌ಐಆರ್‌ನ ಪ್ರತಿ ಕೊಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.  ಗಾಂಧಿ ಕುಟುಂಬಕ್ಕೆ ಎಫ್‌ಆರ್‌ಐ ಪ್ರತಿ ಕೊಡುವಂತೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನೀಡಿದ್ದ ಆದೇಶವನ್ನು ದೆಹಲಿ ಪೊಲೀಸರು ವಿಶೇಷ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್‌ ಗೋಗ್ನೆ ಅವರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನೀಡಿದ್ದ ಆದೇಶವನ್ನು ರದ್ದುಪಡಿಸಿದ್ದು ‘ಎಫ್‌ಐಆರ್‌ ಪ್ರತಿ ಕೊಡಲು ಸಾಧ್ಯವಿಲ್ಲ. ಆದರೆ ಎಫ್‌ಐಆರ್‌ ದಾಖಲಾಗಿದೆ ಎನ್ನುವುದನ್ನು ಪೊಲೀಸರು ಆರೋಪಿಗಳಿಗೆ ತಿಳಿಸಬಹುದು’ ಎಂದು ಸೂಚಿಸಿದ್ದಾರೆ. ಇ.ಡಿ ನೀಡಿದ ದೂರು ಆಧರಿಸಿ ದೆಹಲಿ ಪೊಲೀಸರು ಅಕ್ಟೋಬರ್‌ 3ರಂದು ಸೋನಿಯಾ ಗಾಂಧಿ ರಾಹುಲ್‌ ಗಾಂಧಿ ಮತ್ತು ಇತರರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಎಫ್‌ಐಆರ್‌ನಲ್ಲಿ ಕ್ರಿಮಿನಲ್‌ ಪಿತೂರಿ ಆಸ್ತಿ ದುರುಪಯೋಗ ವಿಶ್ವಾಸದ್ರೋಹ ವಂಚನೆ ಆರೋಪಗಳನ್ನು ಸೇರಿಸಲಾಗಿದೆ.  ಕಾಂಗ್ರೆಸ್‌ ವಾಗ್ದಾಳಿ ‘ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಮೋದಿ ಸರ್ಕಾರದ ಅಕ್ರಮ ಸಂಪೂರ್ಣವಾಗಿ ಬಯಲಾಗಿದೆ’ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ‘ಇ.ಡಿ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಕೋರ್ಟ್‌ ತಿರಸ್ಕರಿಸುವ ಮೂಲಕ ಇದು ರಾಜಕೀಯಪ್ರೇರಿತ ಕಾನೂನು ಬಾಹಿರ ಮೊಕದ್ದಮೆ ಎನ್ನುವುದು ಬಯಲಾಗಿದೆ’ ಎಂದು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌  ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಹೊಸ ಆರೋಪ ಪಟ್ಟಿ ಸಲ್ಲಿಸಲಿರುವ ಇ.ಡಿ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸೋನಿಯಾ ಗಾಂಧಿ ರಾಹುಲ್‌ ಗಾಂಧಿ ಸೇರಿ ಇತರೆ ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಹೊಸ ಆರೋಪ ಪಟ್ಟಿ ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಲಿಸಿಟರ್ ಜನರಲ್ (ಎಸ್‌ಜಿ) ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅವರಿಂದ ಕಾನೂನು ಸಲಹೆ ಪಡೆದು ದೆಹಲಿ ಕೋರ್ಟ್‌ ನೀಡಿರುವ ಆದೇಶದ ವಿರುದ್ಧ ಇ.ಡಿ ಮೇಲ್ಮನವಿ ಸಲ್ಲಿಸಲಿದೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.   ‘ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಮಾಹಿತಿ ವರದಿಯನ್ನು (ಇಸಿಐಆರ್‌) ಕೋರ್ಟ್‌ ಅನೂರ್ಜಿತಗೊಳಿಸಿಲ್ಲ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಇದು ಪೊಲೀಸ್‌ ಎಫ್‌ಐಆರ್‌ಗೆ ಸಮನಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಒಟ್ಟಾರೆ ಪ್ರಕರಣ ಆಧರಿಸಿ 2021ರ ಮೇ 30ರಂದು ಇ.ಡಿ ‘ಇಸಿಐಆರ್‌’ ಸಲ್ಲಿಸಿತ್ತು. ವೈಯಕ್ತಿಕ ಲಾಭಕ್ಕಾಗಿ ತಾಯಿ – ಮಗ  (ಸೋನಿಯಾ ಮತ್ತು ರಾಹುಲ್‌ ಗಾಂಧಿ) ತಮ್ಮ ಹುದ್ದೆಯನ್ನು ಬಳಸಿಕೊಂಡಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಇ.ಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.