ನವದೆಹಲಿ: ಲೋಕಸಭೆಯಲ್ಲಿ ನಿನ್ನೆ (ಸೋಮವಾರ) ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಅಂಗೀಕಾರ ಪಡೆಯಿತು. ಈ ನಡುವೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದು, ಈ ಮಸೂದೆಯು ಕ್ರೀಡಾ ಆಡಳಿತದ ಕೇಂದ್ರೀಕರಣಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈರಾಮ್ ರಮೇಶ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಹೆಚ್ಚಿನ ಅನುಕೂಲವಾಗಲಿದೆ. ಆರ್‌ಟಿಐನಂತಹ ದೇಶದ ಯಾವುದೇ ಕಾನೂನುಗಳಿಗೆ ಈ ಮಸೂದೆ ಒಳಪಡುವುದಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ನಿನ್ನೆ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು ಮತ್ತು ಇಂದು ರಾಜ್ಯಸಭೆಯಲ್ಲಿಯೂ ಅದೇ ರೀತಿ ಪರಿಗಣಿಸಲಾಗುವುದು ಎಂದು ರಮೇಶ್ ಹೇಳಿದ್ದಾರೆ.
ಈ ಸಂಬಂಧ ದಿಗ್ವಿಜಯ ಅವರು ಸಿಂಗ್ ಸ್ವೀಕರ್‌ಗೆ ಪತ್ರ ಬರೆದಿದ್ದು, ಅಂಗೀಕಾರವಾದ ಕ್ರೀಡಾ ಮಸೂದೆಯನ್ನು ಪರಿಶೀಲನೆ ಮತ್ತು ಸಮಾಲೋಚನೆ ನಡೆಸಲು ಸಮಿತಿಗೆ ನೀಡಬೇಕೆಂದು ತಿಳಿಸಿದ್ದರು.
ಬಹುನಿರೀಕ್ಷಿತ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯು ಲೋಕಸಭೆಯಲ್ಲಿ ಸೋಮವಾರ ಅಂಗೀಕಾರ ಪಡೆಯಿತು. ಸ್ವಾತಂತ್ರ್ಯ ನಂತರ ಭಾರತದ ಕ್ರೀಡಾಕ್ಷೇತ್ರದಲ್ಲಿ ಆದ ಅತಿದೊಡ್ಡ ಸುಧಾರಣೆ ಇದು ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಬಣ್ಣಿಸಿದರು.
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ ವಿರೋಧ ಪಕ್ಷಗಳ ಪ್ರತಿಭಟನೆಯ–ಗದ್ದಲದ ನಡುವೆಯೇ ಮಸೂದೆಗೆ ಒಪ್ಪಿಗೆ ಪಡೆಯಲಾಯಿತು. ಗದ್ದಲದ ನಂತರ ಸೋಮವಾರ ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಕಲಾಪ ಪುನರಾರಂಭವಾದಾಗ ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ (ತಿದ್ದುಪಡಿ) ಮಸೂದೆಯನ್ನೂ ಅಂಗೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.