ನವದೆಹಲಿ: ವರ್ಷಾಂತ್ಯದ ವೇಳೆಗೆ ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಲು ಮುಂದಾಗಿರುವ ಚುನಾ ವಣಾ ಆಯೋಗ, ಈ ಕುರಿತು ಶೀಘ್ರದಲ್ಲಿಯೇ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.
ಎಸ್‌ಐಆರ್ ಕುರಿತು ವಿವಿಧ ರಾಜ್ಯಗಳ ಚುನಾವಣಾ ಅಧಿಕಾರಿಗಳೊಂದಿಗೆ ಆಯೋಗದ ಹಿರಿಯ ಅಧಿಕಾರಿಗಳು ಬುಧವಾರ ದಿನವಿಡೀ ಮಹತ್ವದ ಸಭೆಗಳನ್ನು ನಡೆಸಿದರು.
ರಾಷ್ಟ್ರದಾದ್ಯಂತ ಎಸ್‌ಐಆರ್ ನಡೆಸಲು ಕೈಗೊಂಡಿರುವ ಸಿದ್ಧತಾ ಕಾರ್ಯಗಳ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು, ವಿವೇಕ್ ಜೋಶಿ ಅವರೂ ಪಾಲ್ಗೊಂಡಿದ್ದರು.
ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ವಿನೋದ್ ಸಿಂಗ್ ಗುಂಜಿ ಯಾಲ್ ಅವರು, ವಿವಾದಗಳ ನಡುವೆಯೂ ರಾಜ್ಯದಲ್ಲಿ ಎಸ್‌ಐಆರ್ ಜಾರಿಗೆ ಅಳವಡಿಸಿಕೊಂಡ ಕಾರ್ಯ ತಂತ್ರ, ನಿಯಮಗಳು, ನಡೆಸಿದ ಕಸರತ್ತಿನ ವಿವರವನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿದರು.
ಮುಂದಿನ ವರ್ಷದ (2026) ಏಪ್ರಿಲ್–ಮೇ ತಿಂಗಳಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಿದ್ದು, ಅದಕ್ಕೂ ಮುನ್ನವೇ, ಈ ವರ್ಷಾಂತ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಹಾಜರಿದ್ದ ಸಿಇಒಗಳು ತಮ್ಮ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟಾರೆ ಮತದಾರರ ಸಂಖ್ಯೆ, ಹಿಂದೆ ನಡೆದಿದ್ದ ಎಸ್‌ಐಆರ್ ಮತ್ತು ಮತದಾರರ ಪಟ್ಟಿಯ ಕುರಿತು ವಿವರವಾದ ಮಾಹಿತಿಯನ್ನು ಪ್ರಸ್ತುತಪಡಿಸಿದರು ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ದೇಶದಾದ್ಯಂತ ಎಸ್‌ಐಆರ್ ನಡೆಸಲು ಚುನಾವಣಾ ಆಯೋಗ ಜೂನ್ 24ರಂದು ನಿರ್ಧರಿಸಿತ್ತು. ಅಕ್ಟೋಬರ್–ನವೆಂಬರ್‌ನಲ್ಲಿ ಚುನಾವಣೆ ನಡೆಯಲಿ ರುವ ಬಿಹಾರದಿಂದ ಅದನ್ನು ಪ್ರಾರಂಭಿಸುವುದಾಗಿ ತಿಳಿಸಿತ್ತು. ದೇಶದ ಇತರ ಭಾಗಗಳಿಗೆ ಮುಂದಿನ ದಿನಗಳಲ್ಲಿ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದೂ ಆಯೋಗ ಹೇಳಿತ್ತು.
‘ದೇಶದಲ್ಲಿ 2003ರಲ್ಲಿ ಕೊನೆಯ ದಾಗಿ ಎಸ್‌ಐಆರ್ ನಡೆಸಲಾಗಿತ್ತು. ನಗರೀಕರಣ, ಹೆಚ್ಚುತ್ತಿರುವ ವಲಸೆ ಯಿಂದಾಗಿ ಮತದಾರರ ಪಟ್ಟಿಯಲ್ಲಿ ಪದೇ ಪದೇ ಬದಲಾವಣೆಗಳು ಆಗುತ್ತಿವೆ. ಹೀಗಾಗಿ ಎಸ್‌ಐಆರ್ ಅಗತ್ಯವಾಗಿದೆ’ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿತ್ತು.
ಬಾಂಗ್ಲಾ ಮತ್ತು ಮ್ಯಾನ್ಮಾರ್ ಅಕ್ರಮ ವಲಸಿಗರನ್ನು ಹಲವು ರಾಜ್ಯಗಳಲ್ಲಿ ಪತ್ತೆ ಮಾಡಿದ ನಂತರ ವಿದೇಶಿ ಅಕ್ರಮ ವಲಸಿಗರನ್ನು ಪಟ್ಟಿಯಿಂದ ತೆಗೆಯುವುದು ಈ ವಿಶೇಷ ಪರಿಷ್ಕರಣೆಯ ಪ್ರಾಥಮಿಕ ಉದ್ದೇಶ. ಚುನಾವಣಾ ಅಧಿಕಾರಿಗಳು ಮನೆ– ಮನೆಗೆ ಭೇಟಿ ನೀಡಿ ಪರಿಶೀಲಿಸುವ ಮೂಲಕ ದೋಷಮುಕ್ತ ಮತದಾರರ ಪಟ್ಟಿ ರಚನೆಯ ಕ್ರಮ ವಹಿಸಲಿದ್ದಾರೆ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದರು. ಎಸ್‌ಐಆರ್ ಅನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳು, ‘ಬಿಜೆಪಿಗೆ ಲಾಭ ಮಾಡುವ ಉದ್ದೇಶದಿಂದಲೇ ಮತದಾರರ ಮಾಹಿತಿ ತಿರುಚುವ ಕೆಲಸವನ್ನು ಆಯೋಗ ಮಾಡುತ್ತಿದೆ’ ಎಂದು ದೂರಿವೆ.
ಹೊರರಾಜ್ಯಗಳಲ್ಲಿ ನೆಲಸಿರುವವರಿಗಾಗಿಯೇ ಹೆಚ್ಚುವರಿಯಾಗಿ ‘ಘೋಷಣಾ ಅರ್ಜಿ’ಯೊಂದನ್ನು ಪರಿಚಯಿಸಲು ಆಯೋಗ ಮುಂದಾಗಿದೆ. 1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ಮಧ್ಯೆ ಭಾರತದಲ್ಲಿ ಜನಿಸಿರುವ ಬಗ್ಗೆ ಅವರೆಲ್ಲ ದೃಢಪಡಿಸಬೇಕು. ಜನ್ಮ ದಿನಾಂಕ ಮತ್ತು ವಾಸಸ್ಥಳದ ದೃಢೀಕರಣ ಪತ್ರಗಳನ್ನು ಸಲ್ಲಿಸಬೇಕು. ಯಾವುದೇ ಅರ್ಹ ನಾಗರಿಕ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಈಗಾಗಲೇ ಬಿಹಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆಯೋಗಕ್ಕೆ ಸೂಚನೆ ನೀಡಿದೆ. ಕೆಲವು ರಾಜ್ಯಗಳು 2002 ಮತ್ತು 2004ರ ಮಧ್ಯೆ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಿದ್ದವು.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಮತದಾರರ ಗುರುತಿನ ದಾಖಲೆಯಾಗಿ ಆಧಾರ್ ಕಾರ್ಡ್ ಅನ್ನು ಪರಿಗಣಿಸುವಂತೆ ಚುನಾವಣಾ ಆಯೋಗವು ಬಿಹಾರದ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಈ ನಿರ್ದೇಶನ ನೀಡಿದೆ. ಈ ಸಂಬಂಧ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ ಆಯೋಗವು, ‘ಮತದಾರರ ಗುರುತಿಗೆ ಗೊತ್ತುಪಡಿಸಲಾದ 11 ದಾಖಲೆಗಳ ಜೊತೆಗೆ 12ನೇ ದಾಖಲೆಯಾಗಿ ಆಧಾರ್ ಕಾರ್ಡ್ ಅನ್ನು ಪರಿಗಣಿಸಬಹುದು’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.