ADVERTISEMENT

ಸಿಎಎ ವಿರುದ್ಧ ದೇಶದಾದ್ಯಂತ ಮಾನವ ಸರಪಳಿ ರಚಿಸಿ ಹೋರಾಟ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 19:45 IST
Last Updated 16 ಜನವರಿ 2020, 19:45 IST
   

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಗೆ, ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲಾರ್ಥವಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕ ನೀತಿಗಳನ್ನು ವಿರೋಧಿಸಿ ಇದೇ 30 ರಂದು ದೇಶದಾದ್ಯಂತ 100ಕ್ಕೂ ಹೆಚ್ಚು ಸಂಘಟನೆಗಳ ಒಕ್ಕೂಟವು ಮಾನವ ಸರಪಳಿ ಚಳವಳಿ ಹಮ್ಮಿಕೊಂಡಿವೆ.

ಜನವರಿ 30 ರಂದು ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಕಾರ್ಯಕ್ರಮ ನಡೆಯಲಿದ್ದು, ದೆಹಲಿಯ ರಾಜ್‌ಘಾಟ್‌ದಿಂದಲೇ ಮಾನವ ಸರಪಳಿ ರಚಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಬುಡಕಟ್ಟು ಸಮುದಾಯ, ವಿದ್ಯಾರ್ಥಿಗಳು, ಕಾರ್ಮಿಕರು, ವಕೀಲರು, ಅಂಗವಿಕಲರು ಮತ್ತಿತರ 111 ಸಂಘಟನೆಗಳು ಸೇರಿ ‘ಜನ ಏಕ್ತಾ ಜನ ಅಧಿಕಾರ ಆಂದೋಲನ’ (ಜೆಇಜೆಎಎ) ರಚಿಸಿಕೊಂಡಿದ್ದು, ಇದರ ಅಡಿಯಲ್ಲಿ ಈ ಹೋರಾಟ ನಡೆಯಲಿದೆ.

ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮ ದಿನಾಚರಣೆಯಾದ ಇದೇ 23 ಅನ್ನು ‘ಪ್ರಜಾಪ್ರಭುತ್ವ ಉಳಿಸಿ’ ಎಂದು ಆಚರಿಸಲು ಮತ್ತು ಗಣರಾಜ್ಯೋತ್ಸವದಂದು ಜಿಲ್ಲಾಮಟ್ಟದಲ್ಲಿ ಸಾಮೂಹಿಕ ಸಭೆ ನಡೆಸಿ ಸಂವಿಧಾನದ ಮುನ್ನುಡಿಯನ್ನು ಓದುವ ಕಾರ್ಯಕ್ರವನ್ನೂ ಈ ಒಕ್ಕೂಟ ಹಮ್ಮಿಕೊಂಡಿದೆ.

ADVERTISEMENT

‘ಜೆಇಜೆಎಎ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮಾನವ ಸರಪಳಿ ರಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅಂದು ಕೋಮುವಾದಿ ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರದ ಕಾರ್ಯಸೂಚಿಯನ್ನು ಬಹಿರಂಪಡಿಸಲಾಗುವುದು’ ಎಂದು ಒಕ್ಕೂಟದ ಸಮನ್ವಯ ಸಮಿತಿ ಸದಸ್ಯ ಪಿ.ಕೃಷ್ಣಪ್ರಸಾದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.