ADVERTISEMENT

ಪರಿಸರ ಪ್ರೇಮಿ, ಅರಣ್ಯ ರಕ್ಷಕ ಬೈಜು.ಕೆ. ವಾಸುದೇವನ್ ನಿಧನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 10:33 IST
Last Updated 17 ಜೂನ್ 2019, 10:33 IST
ಬೈಜು  (ಕೃಪೆ: ಫೇಸ್‌ಬುಕ್)
ಬೈಜು (ಕೃಪೆ: ಫೇಸ್‌ಬುಕ್)   

ತ್ರಿಶ್ಶೂರ್: ಅರಣ್ಯ ರಕ್ಷಣೆಗಾಗಿ ಸದಾ ದುಡಿಯುತ್ತಿದ್ದ ಪರಿಸರ ಪ್ರೇಮಿ ಮತ್ತು ವನ್ಯಜೀವಿ ಛಾಯಾಗ್ರಾಹಕ ಬೈಜು.ಕೆ. ವಾಸುದೇವನ್ (43) ಭಾನುವಾರ ತ್ರಿಶ್ಶೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಾಸುದೇವನ್ ಮತ್ತು ನಬೀಸಾ ದಂಪತಿಯ ಪುತ್ರನಾದ ಬೈಜು ಆದಿರಪ್ಪಳ್ಳಿ ಅರಣ್ಯಭಾಗದಲ್ಲಿ ಆದಿವಾಸಿ ಜನರೊಂದಿಗೆ ಬೆಳೆದಿದ್ದರು.ಮೊದಮೊದಲು ಬೇಟೆಗಾರನಾಗಿದ್ದ ಇವರು ಕಳ್ಳಭಟ್ಟಿಯನ್ನೂ ತಯಾರಿಸುತ್ತಿದ್ದರು.ಕಾಡಿನೊಂದಿಗೆ ಹೆಚ್ಚು ಒಡನಾಟ ಹೊಂದಿದ್ದರಿಂದ ವನ್ಯಜೀವಿಗಳತ್ತ ಒಲವು ಬೆಳೆಯ ತೊಡಗಿತು. ಆಮೇಲೆ ಅವರು ಅರಣ್ಯಪಾಲಕರಾದರು.

ಆದಿರಪ್ಪಳ್ಳಿ ಅರಣ್ಯದಲ್ಲಿ ಗಂಡು ಹಾರ್ನ್‌ಬಿಲ್ ಸತ್ತು ಹೋದಾಗ ಹಾಕಿದ ಒಂದು ಫೇಸ್‌ಬುಕ್ ಪೋಸ್ಟ್‌ನಿಂದಾಗಿ ಬಿಜು ಗಮನ ಸೆಳೆದರು. ಸಾಮಾನ್ಯ ಎತ್ತರದಲ್ಲಿ ಹಾರುತ್ತಿದ್ದ ಹಾರ್ನ್‌ಬಿಲ್ ಒಂದಕ್ಕೆ ಕಾರೊಂದು ಡಿಕ್ಕಿ ಹೊಡೆದು ಹಕ್ಕಿಸತ್ತಿದ್ದು,ಮನುಷ್ಯನ ಅಹಂಕಾರದ ಬಗ್ಗೆ ಬೈಜು ಫೇಸ್‌ಬುಕ್‌ನಲ್ಲಿ ಬರೆದಿದ್ದರು.

ಹೆಣ್ಣು ಹಾರ್ನ್‌ಬಿಲ್ ಮೊಟ್ಟೆಗೆ ಕಾವು ಕೊಟ್ಟು ಮರಿ ಬರುವವರೆಗೆ ಗಂಡು ಹಾರ್ನ್‌ಬಿಲ್ ಅದನ್ನು ಕಾಯುತ್ತಾ ಇರುತ್ತದೆ. ಅಂದರೆ ಹೆಣ್ಣು ಹಾರ್ನ್‌ಬಿಲ್‌ಗೆ ಆಹಾರ ಕೊಡುವುದು ಕೂಡಾ ಗಂಡು ಹಾರ್ನ್‌ಬಿಲ್.ಇದೀಗ ಗಂಡು ಹಾರ್ನ್‌ಬಿಲ್ ಸತ್ತ ಕಾರಣ ಹೆಣ್ಣು ಹಾರ್ನ್‌ಬಿಲ್ ಹಸಿವೆಯಿಂದ ಸಾಯುತ್ತದೆ ಎಂದು ಬರೆದ ಬೈಜು, ಹೆಣ್ಣು ಹಾರ್ನ್‌ಬಿಲ್‌ನ ರಕ್ಷಣೆ ಮಾಡಿದ್ದರು.

ADVERTISEMENT

ಬೈಜು ಅವರ ಈ ಕಾಳಜಿ ಮತ್ತು ಪ್ರೀತಿ ಜನಮೆಚ್ಚುಗೆ ಗಳಿಸಿದ್ದು,ವನ್ಯಜೀವಿ ಛಾಯಾಗ್ರಾಹಕ ಮತ್ತು ಪರಿಸರ ಪ್ರೇಮಿಗಳ ಐಕಾನ್ ಆಗಿ ಬಿಟ್ಟರು.ಇವರು ಮಲಯಾಳಂ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ.

ಆದಿರಪ್ಪಳ್ಳಿ ಹೈಡಲ್ ಪವರ್ ಪ್ಲಾಂಟ್ ಯೋಜನೆ ಪ್ರಸ್ತಾವ ಬಂದಾಗ ಆ ಯೋಜನೆ ವಿರುದ್ಧ ದನಿಯೆತ್ತಿದ್ದರು ಬೈಜು.

ಮೂಲಗಳ ಪ್ರಕಾರ ಬೈಜು ಅವರು ಮನೆಯ ಮೇಲಿರುವ ವಾಟರ್ ಟ್ಯಾಂಕ್ ಸ್ವಚ್ಛ ಮಾಡುವಾಗಮಹಡಿಯಿಂದ ಬಿದ್ದಿದ್ದರು.ಶನಿವಾರ ಅವರು ಚಾಲಕ್ಕುಡಿ ತಾಲೂಕು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಶನಿವಾರ ರಾತ್ರಿ ಅಸ್ವಸ್ಥರಾಗಿದ್ದು, ತಕ್ಷಣವೇ ತ್ರಿಶ್ಶೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಿದ್ದು ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಬೈಜು ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.