ನವದೆಹಲಿ: ದೇಶೀಯ ನಿರ್ಮಿತ ಲಘು ಯುದ್ಧ ವಿಮಾನ ’ತೇಜಸ್‘ ನಿಗದಿತ ಸ್ಥಳದಲ್ಲಿ ನಿಯಂತ್ರಿತ ಇಳಿಸುವಿಕೆ(ಅರೆಸ್ಟೆಡ್ ಲ್ಯಾಂಡಿಂಗ್) ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.
ಈ ಪರೀಕ್ಷೆಯಲ್ಲಿ ಯಶಸ್ವಿಯಾದ ದೇಶದ ಮೊದಲ ಯುದ್ಧ ವಿಮಾನ ಎಂಬ ಹೆಗ್ಗಳಿಕೆಗೆ ತೇಜಸ್ ಪಾತ್ರವಾಗಿದೆ. ನೌಕಾ ಪಡೆ ಕಾರ್ಯಾಚರಣೆಗಳಲ್ಲಿ ಸೇರ್ಪಡೆಯಾಗಲಿರುವ ತೇಜಸ್ ಪ್ರಮುಖ ಹಂತವನ್ನು ಪೂರೈಸಿದಂತಾಗಿದೆ.
ವೇಗವಾಗಿ ಹಾರಾಟ ನಡೆಸುವ ಯುದ್ಧ ವಿಮಾನ ಅತ್ಯಂತ ಕಡಿಮೆ ಅಂತರದಲ್ಲಿ ಸುರಕ್ಷಿತವಾಗಿ ಇಳಿಯುವ ಸಾಮರ್ಥ್ಯ ಪರೀಕ್ಷೆ ಇದಾಗಿತ್ತು. ಯುದ್ಧ ನೌಕೆಯಿಂದ ಹಾರುವ ಯುದ್ಧ ವಿಮಾನ ಕಾರ್ಯಾಚರಣೆಯ ಬಳಿಕ ನೌಕೆಯ ನಿಗದಿತ ಸ್ಥಳದಲ್ಲಿ ಇಳಿಯಬೇಕು.
ಗೋವಾದ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಹಡಗು ಕಟ್ಟೆಯಲ್ಲಿರುವಂತೆ ಕಿರಿದಾದ ಜಾಗದಲ್ಲಿ ವೇಗವಾಗಿ ಹಾರಿ ಬಂದ ತೇಜಸ್ ಸುರಕ್ಷಿತವಾಗಿ ಇಳಿದು ನಿಂತಿತು. ಅಮೆರಿಕ, ರಷ್ಯಾ, ಯುಕೆ, ಫ್ರಾನ್ಸ್ ಹಾಗೂ ಇತ್ತೀಚೆಗೆ ಚೀನಾದ ಕೆಲವೇ ಯುದ್ಧ ವಿಮಾನಗಳು ಮಾತ್ರ ನಿರ್ಬಂಧಿತ ಇಳಿಯುವಿಕೆಯಲ್ಲಿ ಯಶಸ್ವಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.