ADVERTISEMENT

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಾಖಡ್‌ ಭೇಟಿಯಾದ ನವಜೋತ್ ಸಿಧು

ಪಿಟಿಐ
Published 17 ಜುಲೈ 2021, 11:09 IST
Last Updated 17 ಜುಲೈ 2021, 11:09 IST
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು   

ಚಂಡೀಗಡ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಶನಿವಾರ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ (ಪಿಪಿಸಿಸಿ) ಸುನಿಲ್ ಜಾಖಡ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಅರ್ಧ ತಾಸಿಗೂ ಹೆಚ್ಚು ಹೊತ್ತು ಮಾತುಕತೆಯ ಬಳಿಕ ಪ್ರತಿಕ್ರಿಯಿಸಿರುವ ಸಿಧು, ಜಾಖಡ್‌ ತಮಗೆ ಹಿರಿಯ ಸೋದರನಾಗಿದ್ದು, ಮಾರ್ಗದರ್ಶಕ ಶಕ್ತಿ ಎಂದಿದ್ದಾರೆ.

ಅತ್ತ ಸಿಧು ಸಮರ್ಥ ವ್ಯಕ್ತಿ ಎಂದು ಜಖರ್ ಬಣ್ಣಿಸಿದರು. ಆದರೆ ಸಿಧು ಹಾಗೂ ಸುನಿಲ್ ಭೇಟಿಯು ಕುತೂಹಲ ಮೂಡಿಸಿದೆ.

ಪಂಜಾಬ್ ಕಾಂಗ್ರೆಸ್‌ನ ಆಂತರಿಕ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಸಿಧು ಅವರಿಗೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ಮುಂದಾಗಿದೆ ಎಂಬುದು ವರದಿಯಾಗಿದೆ.

ಮೂಲಗಳ ಪ್ರಕಾರ ಸಿಧು ಅವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆ ನೀಡುವುದಕ್ಕೆ ಅಸಮಾಧಾನ ಸೂಚಿಸಿರುವ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಶುಕ್ರವಾರದಂದೇ ಮಾಜಿ ಸಚಿವ ನವಜೋತ್‌ ಸಿಂಗ್‌ ಸಿಧು ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಂಜಾಬ್‌ ಕಾಂಗ್ರೆಸ್‌ ಪಕ್ಷದ ಉಸ್ತುವಾರಿ ಹರೀಶ್ ರಾವತ್‌ ಉಪಸ್ಥಿತರಿದ್ದರು.

ಒಟ್ಟಿನಲ್ಲಿ ಅಮರಿಂದರ್ ಹಾಗೂ ಸಿಧು ಜೊತೆಯಾಗಿ ಕಾರ್ಯಾಚರಣೆ ಮುಂದುವರಿಸಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.