ADVERTISEMENT

ಛತ್ತೀಸ್‌ಗಡ: ಪ್ರತ್ಯೇಕ ಎನ್‌ಕೌಂಟರ್‌, ಐವರು ನಕ್ಸಲರ ಹತ್ಯೆ

ಪಿಟಿಐ
Published 18 ಜನವರಿ 2022, 12:45 IST
Last Updated 18 ಜನವರಿ 2022, 12:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸುಕ್ಮಾ/ರಾಯ್‌ಪುರ: ಛತ್ತೀಸ್‌ಗಡದ ಸುಕ್ಮಾ ಜಿಲ್ಲೆ ಮತ್ತು ಛತ್ತೀಸ್‌ಗಡ–ತೆಲಂಗಾಣ ಗಡಿ ಭಾಗದ ಅರಣ್ಯ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿ ಮಂಗಳವಾರ ಬೆಳಿಗ್ಗೆ ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸುಕ್ಮಾ, ದಾಂತೇವಾಡ ಮತ್ತು ಬಸ್ತಾರ್‌ಗೆ ಸೇರಿದ ಜಿಲ್ಲಾ ಮೀಸಲು ರಕ್ಷಣಾ ದಳದ (ಜಿಆರ್‌ಜಿ) ಭದ್ರತಾ ಸಿಬ್ಬಂದಿಗಳು ಸುಕಾ ಜಿಲ್ಲೆಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಕ್ಸಲರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮಹಿಳೆ ಹತ್ಯೆಯಾಗಿದ್ದಾರೆ. ಇವರ ಹತ್ಯೆಗೆ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದರು.

‘ನೆರೆಯ ತೆಲಂಗಾಣ ಪೊಲೀಸರ ವಿಶೇಷ ನಕ್ಸಲ್ ವಿರೋಧಿ ಗ್ರೇಹೌಂಡ್ಸ್ ಘಟಕದ ತಂಡವು ಬಿಜಾಪುರ (ಛತ್ತೀಸ್‌ಗಡ) ಮತ್ತು ಮುಲುಗು (ತೆಲಂಗಾಣ) ಜಿಲ್ಲೆಗಳ ಅರಣ್ಯದಲ್ಲಿ ಮಾವೋವಾದಿ ನಾಯಕ ಸುಧಾಕರ್ ಮತ್ತು 40 ಶಸ್ತ್ರಸಜ್ಜಿತ ನಕ್ಸಲ್ ಕಾರ್ಯಕರ್ತರ ಮಾಹಿತಿ ಪಡೆದ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು’ ಎಂದುಇನ್‌ಸ್ಪೆಕ್ಟರ್‌ ಜನರಲ್ ಆಫ್ ಪೊಲೀಸ್ (ಬಸ್ತರ್ ರೇಂಜ್) ಸುಂದರರಾಜ್ ಪಿ. ಪಿಟಿಐಗೆ ತಿಳಿಸಿದರು.

ADVERTISEMENT

‘ಬೆಳಿಗ್ಗೆ 7 ಗಂಟೆ ಸುಮಾರಿಗೆ ಗ್ರೇಹೌಂಡ್ಸ್ ತಂಡವು ಸೇಮಲ್ದೊಡ್ಡಿ ಗ್ರಾಮ (ಬಿಜಾಪುರ) ಮತ್ತು ಪೆನುಗೋಲು ಗ್ರಾಮದ (ಮುಲುಗು) ಸಮೀಪದ ಕಾಡಿನಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆಸಿತು. ಈ ವೇಳೆ ನಾಲ್ವರು ನಕ್ಸಲರು ಹತರಾಗಿದ್ದಾರೆ’ ಎಂದು ಅವರು ಹೇಳಿದರು.

ಗ್ರೇಹೌಂಡ್ಸ್ ಸೈನಾ ಸಿಬ್ಬಂದಿಯೊಬ್ಬರಿಗೆ ಗಾಯಗಳಾಗಿದ್ದು ಅವರನ್ನು ವಾರಂಗಲ್‌ಗೆ ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುಂದರ್‌ರಾಜ್‌ ಹೇಳಿದರು.

ಸಿಪಿಐ (ಮಾವೋವಾದಿ) ಉಗ್ರ ಸಂಘಟನೆಯ ಉನ್ನತ ವಿಭಾಗೀಯ ಸಮಿತಿ ಸದಸ್ಯರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಮೂರು ಪ್ರದೇಶಗಳ ಭದ್ರತಾ ಪಡೆಗಳು ಸೋಮವಾರ ರಾತ್ರಿ ಸುಕ್ಮಾದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಶರ್ಮಾ ತಿಳಿಸಿದರು.

‘ಬೆಳಿಗ್ಗೆ 6.45 ರ ಸುಮಾರಿಗೆ, ಟೋಂಗ್‌ಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಜೂಮ್ ಬೆಟ್ಟಗಳ ಮೇಲೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು.ಬೆಟ್ಟಗಳ ಮೇಲ್ಮುಖ ಭಾಗದಲ್ಲಿ ನಕ್ಸಲರು ಅಡಗಿಕೊಂಡಿರುವುದರಿಂದ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಒಬ್ಬ ನಕ್ಸಲ್‌ ವ್ಯಕ್ತಿಯ ಎನ್‌ಕೌಂಟರ್‌ ನಡೆದಿದೆ. ಆಕೆಯನ್ನು ಮುನ್ನಿ ಎಂದು ಗುರುತಿಸಲಾಗಿದ್ದು ಮೃತದೇಹವನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ’ ಎಂದು ಶರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.