ADVERTISEMENT

ಛತ್ತೀಸಗಢ: ₹89 ಲಕ್ಷ ಇನಾಮು ಘೋಷಣೆಯಾಗಿದ್ದ 22 ಮಂದಿ ಸೇರಿ 28 ನಕ್ಸಲರು ಶರಣು

ಪಿಟಿಐ
Published 25 ನವೆಂಬರ್ 2025, 14:02 IST
Last Updated 25 ನವೆಂಬರ್ 2025, 14:02 IST
ನಕ್ಸಲ್ ಕೂಂಬಿಂಗ್ (ಪ್ರಾತಿನಿಧಿಕ ಚಿತ್ರ)
ನಕ್ಸಲ್ ಕೂಂಬಿಂಗ್ (ಪ್ರಾತಿನಿಧಿಕ ಚಿತ್ರ)   

ನಾರಾಯಣಪುರ(ಛತ್ತೀಸಗಢ): ₹89 ಲಕ್ಷ ಇನಾಮು ಘೋಷಣೆಯಾಗಿದ್ದ 22 ಮಂದಿ ಸೇರಿ 28 ನಕ್ಸಲರು ಛತ್ತೀಸಗಢದ ನಾರಾಯಣಪುರ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

ರಾಜ್ಯ ಸರ್ಕಾರದ 'ನಿಯಾದ್ ನೆಲ್ಲನಾರ್' (ನಿಮ್ಮ ಒಳ್ಳೆಯ ಗ್ರಾಮ) ಯೋಜನೆ, ಶರಣಾಗತಿ ಮತ್ತು ಪುನರ್ವಸತಿ ನೀತಿ ಹಾಗೂ ಪೂನಾ ಮಾರ್ಗೆಮ್ ಯೋಜನೆಯಿಂದ ಪ್ರಭಾವಿತರಾಗಿ 19 ಮಹಿಳೆಯರು ಸೇರಿದಂತೆ 28 ನಕ್ಸಲರು ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾದರು ಎಂದು ಬಸ್ತಾರ್ ವಲಯದ ಪೊಲೀಸ್ ಮಹಾನಿರ್ದೇಶಕ (ಐಜಿಪಿ) ಸುಂದರರಾಜ್ ಪಟ್ಟಿಲಿಂಗಂ ಹೇಳಿದ್ದಾರೆ.

‘ನಿಯಾದ್ ನೆಲ್ಲನಾರ್’ ಯೋಜನೆಯು ದೂರದ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದ್ದರೆ, 'ಪೂನಾ ಮಾರ್ಗೆಮ್" ಬಸ್ತಾರ್ ರೇಂಜ್ ಪೊಲೀಸರು ಆರಂಭಿಸಿದ ಪುನರ್ವಸತಿ ಉಪಕ್ರಮವಾಗಿದೆ. ಶರಣಾದವರಲ್ಲಿ ನಾಲ್ಕು ಹಾರ್ಡ್‌ಕೋರ್ ನಕ್ಸಲ್ ಕೇಡರ್‌ಗಳ ವಿಭಾಗೀಯ ಸಮಿತಿ ಸದಸ್ಯ ಪಾಂಡಿ ಧ್ರುವ್ ಅಲಿಯಾಸ್ ದಿನೇಶ್ (33), ದುಲೆ ಮಾಂಡವಿ ಅಲಿಯಾಸ್ ಮುನ್ನಿ (26), ಛತ್ತೀಸ್ ಪೋಯಂ (18), ಮತ್ತು ಪಡ್ನಿ ಓಯಂ (30), ಮಾವೋವಾದಿಗಳ ಪೂರ್ವ ಬಸ್ತಾರ್ ವಿಭಾಗದ ಮಿಲಿಟರಿ ಕಂಪನಿ ಸಂಖ್ಯೆ 6ರ ಮೂವರು ಸದಸ್ಯರ ತಲೆಗೆ ತಲಾ ₹8 ಲಕ್ಷ ಇನಾಮು ಘೋಷಣೆಯಾಗಿತ್ತು ಎಂದು ಅವರು ಹೇಳಿದ್ದಾರೆ.

ADVERTISEMENT

ಶರಣಾದ ಇತರರ ಪೈಕಿ ಪ್ರದೇಶ ಸಮಿತಿ ಸದಸ್ಯರಾದ ಲಖ್ಮು ಉಸೆಂಡಿ(20), ಸುಕ್ಮತಿ ನುರೇಟಿ (25), ಸಕಿಲಾ ಕಶ್ಯಪ್ (35), ಶಂಬಟ್ಟಿ ಶೋರಿ (35), ಚೈತೆ ಅಲಿಯಾಸ್ ರಜಿತಾ (30) ಮತ್ತು ಬುಧ್ರಾ ರಾವ (28) ಅವರ ತಲೆಗೆ ತಲಾ ₹5 ಲಕ್ಷ ಇನಾಮು ಘೋಷಣೆಯಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ದಿನೇಶ್, ಲಖ್ಮು ಮತ್ತು ಸುಕ್ಮಾತ್ರಿ ಕ್ರಮವಾಗಿ ಒಂದು ಸೆಲ್ಫ್ ಲೋಡಿಂಗ್ ರೈಫಲ್(ಎಸ್‌ಎಲ್‌ಆರ್), ಇನ್ಸಾಸ್ ರೈಫಲ್ ಮತ್ತು ಒಂದು 303 ರೈಫಲ್ ಅನ್ನು ಪೊಲೀಸರಿಗೆ ಹಸ್ತಾಂತರಿಸಿದರು ಎಂದು ಅವರು ಹೇಳಿದ್ದಾರೆ.

‘ನಾರಾಯಣಪುರದಲ್ಲಿ ಶರಣಾಗಿರುವ 28 ನಕ್ಸಲರಿಗೆ ಪುನರ್ವಸತಿ ಕಲ್ಪಿಸುತ್ತಿರುವುದು, ಹಿಂಸೆಯಿಂದ ಕೂಡಿದ ಹಾಗೂ ಜನರ ವಿರೋಧಿ ಮಾವೋವಾದಿ ಸಿದ್ಧಾಂತದ ಅಂತ್ಯ ಸನ್ನಿಹಿತ ಎಂಬ ಸಂದೇಶ ರವಾನಿಸಿದೆ’ ಎಂದೂ ಐಜಿಪಿ ಸುಂದರರಾಜ್‌ ಪಟ್ಟಿಲಿಂಗಮ್‌ ಹೇಳಿದ್ದಾರೆ.

ನಾರಾಯಣಪುರ ಸೇರಿ ಏಳು ಜಿಲ್ಲೆಗಳಲ್ಲಿ ಕಳೆದ 50 ದಿನಗಳಲ್ಲಿ 512 ನಕ್ಸಲರು ಹಿಂಸೆಯ ಮಾರ್ಗವನ್ನು ತೊರೆದು, ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.