ಪ್ರಾತಿನಿಧಿಕ ಚಿತ್ರ
ಬಿಜಾಪುರ್: ಛತ್ತೀಸಗಢದಲ್ಲಿ ನಕ್ಸಲರು ಸೋಮವಾರ ಅಟ್ಟಹಾಸ ಮೆರೆದಿದ್ದಾರೆ. ದಂತೆವಾಡಾ ಜಿಲ್ಲೆಯಿಂದ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮುಗಿಸಿ ಮರಳುತ್ತಿದ್ದ ಜಿಲ್ಲಾ ಮೀಸಲು ಪಡೆಯ (ಡಿಆರ್‌ಜಿ) ಅಧಿಕಾರಿಗಳಿದ್ದ ಕಾರನ್ನು ಕಚ್ಚಾ ಬಾಂಬ್ ಬಳಸಿ ನಕ್ಸರು ಸ್ಫೋಟಿಸಿದ್ದು, ಎಂಟು ಪೊಲೀಸರು ಹಾಗೂ ಕಾರಿನ ಚಾಲಕ ಹುತಾತ್ಮರಾಗಿದ್ದಾರೆ.
ಸೋಮವಾರ ಮಧ್ಯಾಹ್ನ 2.15ಕ್ಕೆ ಬಿಜಾಪುರ್ ಜಿಲ್ಲೆಯ ಬೆದರೆ–ಕುಠರೂ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ವರ್ಷಗಳಲ್ಲಿ ಪೊಲೀಸರ ವಿರುದ್ಧ ನಕ್ಸಲರು ಛತ್ತೀಸಗಢದಲ್ಲಿ ನಡೆಸಿದ ದೊಡ್ಡ ದಾಳಿ ಇದಾಗಿದೆ.
ಸ್ಫೋಟದ ಪರಿಣಾಮ ರಸ್ತೆಯಲ್ಲಿ 10 ಅಡಿ ಆಳದ ಗುಂಡಿ ಸೃಷ್ಟಿಯಾಗಿತ್ತು. ಕಾಂಕ್ರೀಟ್ ರಸ್ತೆಯು ಇಬ್ಭಾಗವಾಗಿತ್ತು. ಪೊಲೀಸರು ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೊ ಕಾರು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಾಗಿ ಬಿದ್ದಿತ್ತು. ಕಾರಿನ ಒಂದು ಭಾಗವು ರಸ್ತೆಯ ಪಕ್ಕದಲ್ಲಿದ್ದ ಮರವೊಂದರ ಮೇಲೆ ನೇತಾಡುತ್ತಿತ್ತು. ಛಿದ್ರಗೊಂಡಿದ್ದ ಪೊಲೀಸರ ಮೃತದೇಹಗಳನ್ನು ಪ್ಲಾಸ್ಟಿಟ್ ಶೀಟಿನ ಮೇಲೆ ಇರಿಸಲಾಗಿತ್ತು.
‘ದಂತೆವಾಡಾ, ಬಿಜಾಪುರ್ ಹಾಗೂ ನಾರಾಯಣಪುರ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಈ ತಂಡ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಐವರು ನಕ್ಸಲರು ಮೃತಪಟ್ಟಿದ್ದರು. ಜೊತೆಗೆ ಒಬ್ಬರು ಹೆಡ್ ಕಾನ್‌ಸ್ಟೆಬಲ್ ಹುತಾತ್ಮರಾಗಿದ್ದರು. ಘಟನೆ ಸಂಬಂಧ ನಕ್ಸಲರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ’ ಎಂದು ಐಜಿಪಿ ಸುಂದರ್‌ರಾಜ್ ಪಿ. ಮಾಹಿತಿ ನೀಡಿದರು.
2023ರ ಏಪ್ರಿಲ್ 26ರಂದು ದಂತೆವಾಡಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ 10 ಮಂದಿ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದರು.
ನಮ್ಮ ಪೊಲೀಸರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. 2026ರ ಮಾರ್ಚ್ ಒಳಗಾಗಿ ಭಾರತದಿಂದ ನಕ್ಸಲ್ ಚಟುವಟಿಕೆಯನ್ನು ಅಂತ್ಯಗೊಳಿಸಲಾಗುವುದು.–ಅಮಿತ್ ಶಾ, ಕೇಂದ್ರ ಗೃಹ ಸಚಿವ
ಬತ್ಸರ್ ಪ್ರದೇಶದಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯಿಂದ ನಕ್ಸಲರು ಹತಾಶರಾಗಿದ್ದಾರೆ. ಇದಕ್ಕಾಗಿಯೇ ಇಂಥ ಹೇಡಿತನದ ಕೆಲಸ ಮಾಡಿದ್ದಾರೆ.–ವಿಷ್ಣುದೇವ್ ಸಾಯಿ, ಛತ್ತೀಸಗಢ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.