
ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮುಂದೆ 15 ನಕ್ಸಲರು ಶರಣಾಗಿದ್ದಾರೆ. ಇವರಲ್ಲಿ ಒಂಬತ್ತು ಮಂದಿ ಬಗ್ಗೆ ಮಾಹಿತಿ ಕೊಟ್ಟವರಿಗೆ ₹ 48 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಐವರು ಮಹಿಳೆಯರು ಮತ್ತು ಪೀಪಲ್ ಲಿಬರೇಷನ್ ಗೆರಿಲ್ಲಾ ಆರ್ಮಿಯ (ಪಿಎಲ್‌ಜಿಎ) ಸದಸ್ಯರು ಶರಣಾದರು ಎಂದು ಸುಕ್ಮಾ ಜಿಲ್ಲಾ ಎಸ್‌ಪಿ ಕಿರಣ್ ಚವಾಣ್ ಮಾಹಿತಿ ನೀಡಿದ್ದಾರೆ.
‘ರಾಜ್ಯ ಸರ್ಕಾರ ತಂದಿರುವ ‘ನಿಯಾದ್ ನೆಲ್ಲನರ್’ (ನಿಮ್ಮ ಉತ್ತಮ ಗ್ರಾಮ) ಯೋಜನೆಯಿಂದ ಪ್ರಭಾವಿತರಾಗಿ ನಕ್ಸಲರು ಶರಣಾಗಿದ್ದಾರೆ. ಕುಗ್ರಾಮಗಳಲ್ಲಿ ಅಭಿವೃದ್ಧಿ, ಶರಣಾದ ನಕ್ಸಲರಿಗೆ ಪುನರ್‌ವಸತಿಯನ್ನು ಈ ಯೋಜನೆಯಡಿ ಕಲ್ಪಿಸಲಾಗಿದೆ. ಇದರಿಂದ ಎಲ್ಲರೂ ಸಶಸ್ತ್ರ ಚಳವಳಿಯ ಪಥ ಬಿಟ್ಟು ಬರುತ್ತಿದ್ದಾರೆ’ ಎಂದು ಎಸ್‌ಪಿ ತಿಳಿಸಿದರು.
ನಾಲ್ವರು ಪ್ರಮುಖ ನಕ್ಸಲ್ ಮುಖಂಡರಾದ ಮಾಡ್ವಿ ಸನ್ನಾ, ಅವರ ಪತ್ನಿ ಸೋದಿ ಹಿಡ್ಮೆ, ಸೂರ್ಯಮ್ ಅಲಿಯಾಸ್ ರವ್ವಾ ಸೋಮ, ಅವರ ಪತ್ನಿ ಮೀನಾ ಅಲಿಯಾಸ್ ಮಾಡ್ವಿ ಭೀಮೆ ಶರಣಾದವರಲ್ಲಿ ಸೇರಿದ್ದಾರೆ. ಇವರಿಗೆ ತಲಾ ₹ 50,000 ನೆರವು ಮತ್ತು ಸರ್ಕಾರದ ಪುನರ್‌ವಸತಿ ನೀತಿಯಂತೆ ಸೌಕರ್ಯ ಕಲ್ಪಿಸಲಾಗುವುದು ಎಂದು ಚವಾಣ್ ತಿಳಿಸಿದ್ದಾರೆ.
ಕಳೆದ 23 ತಿಂಗಳಲ್ಲಿ ಛತ್ತೀಸಗಢದಲ್ಲಿ ಹಿರಿಯ ನಕ್ಸಲ್ ನಾಯಕರು ಸೇರಿದಂತೆ 2,150 ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಚವಾಣ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.