ADVERTISEMENT

ಜಮ್ಮು–ಕಾಶ್ಮೀರ: ಮರುವಿಂಗಡಣೆ ಆಯೋಗದ ಭೇಟಿಗೆ ಪಕ್ಷಗಳ ನಿರ್ಧಾರ

ಜಮ್ಮು–ಕಾಶ್ಮೀರ: ಪಿಡಿಪಿ ಮತ್ತು ಎಎನ್‌ಸಿ ಹೊರತುಪಡಿಸಿ ಉಳಿದ ಪಕ್ಷಗಳ ಆಸಕ್ತಿ

ಪಿಟಿಐ
Published 6 ಜುಲೈ 2021, 19:30 IST
Last Updated 6 ಜುಲೈ 2021, 19:30 IST
 ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ    

ಶ್ರೀನಗರ: ಪಿಡಿಪಿ ಮತ್ತು ಎಎನ್‌ಸಿ ಪಕ್ಷವನ್ನು ಹೊರತುಪಡಿಸಿ, ಕಾಶ್ಮೀರದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಇಲ್ಲಿಗೆ ಆಗಮಿಸಿರುವ ಕ್ಷೇತ್ರ ಮರುವಿಂಗಡಣೆ ಆಯೋಗವನ್ನು ಭೇಟಿ ಮಾಡಲು ನಿರ್ಧರಿಸಿವೆ.

ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್ (ಎಎನ್‌ಸಿ) ಪಕ್ಷಗಳು ಗುಪ್ಕಾರ್ ಕೂಟದಲ್ಲಿವೆ.

‘ಆಯೋಗವು ಸಾಂವಿಧಾನಿಕ ಮತ್ತು ಕಾನೂನಾತ್ಮಕ ಅಧಿಕಾರ ಹೊಂದಿಲ್ಲ. ಇದು ಜಮ್ಮು ಮತ್ತು ಕಾಶ್ಮೀರದ ಜನರ ಒಟ್ಟಾರೆ ರಾಜಕೀಯ ನಿರುತ್ಸಾಹದ ಪ್ರಕ್ರಿಯೆಯ ಭಾಗವಾಗಿದೆ’ ಎಂದು ಆರೋಪಿಸಿರುವ ಪಿಡಿಪಿ, ಆಯೋಗದ ಭೇಟಿಯಿಂದ ದೂರವಿರಲು ನಿರ್ಧರಿಸಿದೆ.

ADVERTISEMENT

‘ಆಯೋಗದ ವರದಿಯಿಂದ ಹೊರಬರುವ ಅಂಶಗಳು ಪೂರ್ವಯೋಜಿತ ಎಂಬ ನಂಬಿಕೆ ಜನರಲ್ಲಿದೆ. ಇದು ಕಾಶ್ಮೀರದ ಜನರ ಹಿತಾಸಕ್ತಿಗೆ ತೊಂದರೆ ನೀಡಲಿವೆ. ಹೀಗಾಗಿ ಈ ಪ್ರಕ್ರಿಯೆಯಿಂದ ಹೊರಗುಳಿಯಲು ಪಕ್ಷದ ನಿರ್ಧರಿಸಿದೆ’ ಎಂದು ಪಿಡಿಪಿ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಲೋನ್ ಹಂಜುರಾ ಅವರು ಹೇಳಿದ್ದಾರೆ. ಸಮಿತಿಯ ಮುಖ್ಯಸ್ಥರಾದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ರಂಜನಾ ದೇಸಾಯಿ ಅವರಿಗೆ ಬರೆದ ಎರಡು ಪುಟಗಳ ಪತ್ರದಲ್ಲಿ ಪಕ್ಷದ ಅಭಿಪ್ರಾಯವನ್ನು ಉಲ್ಲೇಖಿಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದುಆಯೋಗಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವ ಎಎನ್‌ಸಿ, ಆಯೋಗದ ರಚನೆಯನ್ನು ಸುಪ್ರೀಂ ಕೋರ್ಟ್ ಮುಂದೆ ಪ್ರಶ್ನಿಸಲಾಗಿದೆ ಎಂದು ತಿಳಿಸಿದೆ.

ಆಯೋಗವನ್ನು ಭೇಟಿ ಮಾಡಲು ಮತ್ತು ಸಲಹೆಗಳನ್ನು ಮಂಡಿಸಲು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷವು ಐವರು ಸದಸ್ಯರ ತಂಡವನ್ನು ಹೆಸರಿಸಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ. ಅಬ್ದುಲ್ ರಹೀಮ್ ರಾಥರ್, ಮೊಹಮ್ಮದ್ ಶಫಿ ಉರಿ, ಮಿಯಾನ್ ಅಲ್ತಾಫ್ ಅಹ್ಮದ್, ನಾಸಿರ್ ಅಸ್ಲಾಮ್ ವಾನಿ ಮತ್ತು ಸಕಿನಾ ಇಟ್ಟೂ ಅವರು ತಂಡದಲ್ಲಿದ್ದಾರೆ.

ಕಾಂಗ್ರೆಸ್ ಪಕ್ಷದ ನಿಯೋಗದಲ್ಲಿ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ಜಿ.ಎ. ಮೀರ್, ಪೀರ್‌ಜಾದಾ ಮೊಹಮ್ಮದ್ ಸಯೀದ್, ತಾಜ್ ಮೊಹಿಯುದ್ದೀನ್, ಬಶೀರ್ ಅಹ್ಮದ್ ಮ್ಯಾಗ್ರೆ, ಸುರಿಂದರ್ ಸಿಂಗ್ ಚನ್ನಿ ಮತ್ತು ವಿನೋದ್ ಕೌಲ್ ಇದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಸಜ್ಜದ್ ಲೋನ್ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್‌ನಿಂದ ನಾಲ್ವರು ಸದಸ್ಯರು ನಿಯೋಗವನ್ನು ಭೇಟಿಯಾಗಲಿದ್ದಾರೆ. ಬಶೀರ್ ಅಹ್ಮದ್ ದಾರ್, ಮನ್ಸೂರ್ ಹುಸೇನ್, ಮೊಹಮ್ಮದ್ ಖುರ್ಷಿದ್ ಆಲಂ ಮತ್ತು ಮೊಹಮ್ಮದ್ ಅಶ್ರಫ್ ಮಿರ್ ಅವರು ಈ ನಿಯೋಗದಲ್ಲಿದ್ದಾರೆ. ಆದಾಗ್ಯೂ, ಇತರ ಪಕ್ಷಗಳ ಪ್ರತಿನಿಧಿಗಳು ಆಯೋಗವನನ್ನು ಭೇಟಿ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.