ADVERTISEMENT

‘ಅಕ್ಬರ್‌ ಕ್ರೂರಿಯಾಗಿದ್ದರೂ ಸಹಿಷ್ಣುವಾಗಿದ್ದ; ಬಾಬರ್ ನಿರ್ದಯಿ’

ಎನ್‌ಸಿಇಆರ್‌ಟಿ ಸಿದ್ಧಪಡಿಸಿರುವ 8ನೇ ತರಗತಿಯ ಹೊಸ ಪಠ್ಯಪುಸ್ತಕದಲ್ಲಿ ವಿವರಣೆ

ಪಿಟಿಐ
Published 16 ಜುಲೈ 2025, 14:11 IST
Last Updated 16 ಜುಲೈ 2025, 14:11 IST
-
-   

ನವದೆಹಲಿ: ಮೊಘಲ್ ದೊರೆಗಳ ಪೈಕಿ ಅಕ್ಬರ್‌ನ ಆಳ್ವಿಕೆಯು ‘ಕ್ರೌರ್ಯ’ ಮತ್ತು ‘ಸಹಿಷ್ಣುತೆ’ಯಿಂದ ಕೂಡಿತ್ತು. ಬಾಬರ್‌ ‘ನಿರ್ದಯಿ’ ಆಗಿದ್ದರೆ, ಮುಸ್ಲಿಮೇತರರ ಮೇಲೆ ತೆರಿಗೆ ವಿಧಿಸಿದ್ದ ಔರಂಗಜೇಬ್ ‘ಸೇನಾ ಆಡಳಿತಗಾರ’ನಾಗಿದ್ದ...

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಸಿದ್ಧಪಡಿಸಿರುವ 8ನೇ ತರಗತಿಯ ಹೊಸ ಪಠ್ಯಪುಸ್ತಕದಲ್ಲಿ ಮೊಘಲ್‌ ದೊರೆಗಳ ಕುರಿತ ಪಾಠದಲ್ಲಿನ ಅಂಶಗಳಿವು

ಎನ್‌ಸಿಇಆರ್‌ಟಿ, ‘ಎಕ್ಸ್‌ಪ್ಲೋರಿಂಗ್ ಸೊಸೈಟಿ: ಇಂಡಿಯಾ ಅಂಡ್‌ ಬಿಯಾಂಡ್’ ಎಂಬ ಪಠ್ಯಪುಸ್ತಕ ಬಿಡುಗಡೆ ಮಾಡಿದೆ. ಎನ್‌ಸಿಇಆರ್‌ಟಿಯ ನೂತನ ಪಠ್ಯಕ್ರಮದ ಪ್ರಕಾರ ಹೊಸದಾಗಿ ರಚಿಸಿರುವ ಮೊದಲ ಪಠ್ಯಪುಸ್ತಕ ಇದಾಗಿದ್ದು, ದೆಹಲಿ ಸುಲ್ತಾನರು, ಮೊಘಲರು, ಮರಾಠರು ಹಾಗೂ ವಸಾಹುತಶಾಹಿ ಕಾಲ ಕುರಿತು ಪಾಠಗಳು ಇದರಲ್ಲಿವೆ. 

ADVERTISEMENT

‘ಪಠ್ಯಪುಸ್ತಕದ ಈ ಹಿಂದಿನ ಆವೃತ್ತಿಗಳಲ್ಲಿ, ಈ ವಿಷಯಗಳಿಗೆ ಸಂಬಂಧಿಸಿದ ಪಾಠಗಳು 7ನೇ ತರಗತಿಗೆ ಇದ್ದವು. ಆದರೆ, ಈಗ ಕಾಲಾನುಕ್ರಮ ಬದಲಾಗಿದೆ. ‘ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು–2023’ (ಎನ್‌ಸಿಎಫ್‌ಎಸ್‌ಇ) ಅನುಸಾರ ಈ ಎಲ್ಲ ಪಾಠಗಳನ್ನು 8ನೇ ತರಗತಿ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ’ ಎಂದು ಎನ್‌ಸಿಇಆರ್‌ಟಿ ಹೇಳಿದೆ.

ಪಠ್ಯಪುಸ್ತಕ ಪರಿಷ್ಕರಣೆಯನ್ನು ಸರಿಯಾಗಿಯೇ ಮಾಡಲಾಗಿದೆ:

 ಮೊಘಲ್ ದೊರೆಗಳನ್ನು ಕೆಟ್ಟದಾಗಿ ಚಿತ್ರಿಸುವ ಪ್ರಯತ್ನ ಮಾಡಿಲ್ಲ ಮೈಕಲ್‌ ಡ್ಯಾನಿನೊ ಸಮಾಜವಿಜ್ಞಾನ ಪಠ್ಯಕ್ರಮ ಕುರಿತು ಪ್ರಾದೇಶಿಕ ಗುಂಪಿನ ಮುಖ್ಯಸ್ಥ, ಮೊಘಲ್ ದೊರೆಗಳು‌ ದಿರ್ಘ ಅವಧಿಗೆ ಆಳ್ವಿಕೆ ನಡೆಸಿದ್ದಾರೆ. ಈ ಬಗ್ಗೆ ನಮ್ಮ ಮುಂದಿನ ಪೀಳಿಗೆಗಳು ತಿಳಿದುಕೊಳ್ಳಬೇಕು ಹಾಗೂ ಈ ದೇಶದಲ್ಲಿ ಏನೇನು ನಡೆದಿದೆ ಎಂಬ ಬಗ್ಗೆ ಅಧ್ಯಯನ ಮಾಡಬೇಕು. ಅಲ್ಲದೇ ನಾವು ಸತ್ಯ ಸಂಗತಿಗಳನ್ನು ಒಪ್ಪಿಕೊಳ್ಳಬೇಕು ಬಿ.ಎಲ್‌.ವರ್ಮಾ ಕೇಂದ್ರ ಆಹಾರ ಸರಬರಾಜು ಖಾತೆ ರಾಜ್ಯ ಸಚಿವ

ಪಠ್ಯಪುಸ್ತಕದಲ್ಲಿನ ಪ್ರಮುಖ ಅಂಶಗಳು:

* ಪಠ್ಯಪುಸ್ತಕದ ಆರಂಭದಲ್ಲಿ ‘ನೋಟ್‌ ಆನ್ ಸಮ್ ಡಾರ್ಕರ್ ಪಿರಿಯಡ್ಸ್‌ ಇನ್‌ ಹಿಸ್ಟರಿ’ ಎಂಬ ಭಾಗ ಇದೆ. ಪ್ರಮುಖವಾಗಿ ಯುದ್ಧ ಮತ್ತು ರಕ್ತಪಾತಕ್ಕೆ ಕಾರಣವಾದ ಘಟನಗಳಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳನ್ನು ಇಲ್ಲಿ ಕೊಡಲಾಗಿದೆ

* ಕ್ರೂರತೆಯಿಂದ ಕೂಡಿದ ಹಿಂಸೆ ದುರಾಡಳಿತ ಮತ್ತು ಅಧಿಕಾರಸ್ಥರ ತಪ್ಪಾದ ಮಹತ್ವಾಕಾಂಕ್ಷೆಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಗತಕಾಲದ ಈ ಕೃತ್ಯಗಳು/ಘಟನೆಗಳಿಗಾಗಿ ಸದ್ಯದ ಯಾವ ವ್ಯಕ್ತಿಯನ್ನೂ ಹೊಣೆ ಮಾಡಕೂಡದು ಎಂಬ ಟಿಪ್ಪಣಿಯೂ ಇದೆ

* 13ರಿಂದ 17ನೇ ಶತಮಾನದ ಭಾರತದ ಇತಿಹಾಸ ಕುರಿತು ‘ರಿಶೇಪಿಂಗ್ ಇಂಡಿಯಾಸ್‌ ಪೊಲಿಟಿಕಲ್ ಮ್ಯಾಪ್’ ಎಂಬ ಪಾಠ ಇದೆ. ದೆಹಲಿ ಸುಲ್ತಾನರ ಉಗಮ ಮತ್ತು ಪತನ ಸುಲ್ತಾನರಿಗೆ ವಿಜಯನಗರ ಸಾಮ್ರಾಜ್ಯದಿಂದ ವ್ಯಕ್ತವಾಗಿದ್ದ ಪ್ರತಿರೋಧ ಮೊಘಕರ ಆಳ್ವಿಕೆ ಹಾಗೂ ಅವರಿಗೆ ಒಡ್ಡಲಾಗಿದ್ದ ಪ್ರತಿರೋಧ ಸಿಖ್‌ ಧರ್ಮ ಉಗಮ ಕುರಿತು ವಿವರಿಸಲಾಗಿದೆ

* ಮೊಘಲ್‌ ದೊರೆ ಬಾಬರ್‌ ಕುರಿತ ಪಠ್ಯದಲ್ಲಿ ಆತನನ್ನು ‘ಕ್ರೂರಿ ಮತ್ತು ನಿರ್ದಯಿ ನಾಯಕ ನಗರ ಪ್ರದೇಶಗಳ ನಿವಾಸಿಗಳನ್ನು ವಧೆ ಮಾಡಿದ ವ್ಯಕ್ತಿ’ ಎಂದು ವಿವರಿಸಲಾಗಿದೆ. ಔರಂಗಜೇಬ್‌ ಕುರಿತಂತೆ ‘ದೇವಸ್ಥಾನಗಳು ಹಾಗೂ ಗುರುದ್ವಾರಗಳನ್ನು ಧ್ವಂಸಗೊಳಿಸಿದ ಸೇನಾಡಳಿತಗಾರ’ ಎಂದು ವಿವರಿಸಲಾಗಿದೆ

* ದೆಹಲಿ ಸುಲ್ತಾನರು ಹಾಗೂ ಮೊಘಲರ ಕುರಿತು ವಿವರಿಸುವ ಈ ಪಾಠದಲ್ಲಿ ‘ಈ ರಾಜಮನೆತನಗಳ ಅವಧಿಯಲ್ಲಿ ಧಾರ್ಮಿಕ ಅಸಹಿಷ್ಣುತೆಯ ಹಲವಾರು ಘಟನೆಗಳು ನಡೆದಿವೆ’ ಎಂಬ ಉಲ್ಲೇಖವಿದೆ

* ಅಕ್ಬರ್‌ ಆಳ್ವಿಕೆಯು ‘ಕ್ರೂರತೆ ಮತ್ತು ಸಹಿಷ್ಣುತೆಯ ಮಿಶ್ರಣವಾಗಿತ್ತು’ ಎಂದು ಹೇಳಲಾಗಿದೆ. ಆಡಳಿತದ ಉನ್ನತ ಸ್ಥಾನಗಳಲ್ಲಿ ಮುಸ್ಲಿಮೇತರರ ಸಂಖ್ಯೆ ಕಡಿಮೆ ಇತ್ತು. ಚಿತ್ತೂರಗಢ ವಶಪಡಿಸಿಕೊಂಡ ನಂತರ ಅಂದಾಜು 30 ಸಾವಿರ ನಾಗರಿಕರ ಹತ್ಯೆಗೆ ಅಕ್ಬರ್‌ ಆದೇಶಿಸಿದ್ದ ಎಂದು ವಿವರಿಸಲಾಗಿದೆ

* ರಕ್ಷಣೆ ಹಾಗೂ ಸೇನೆಗೆ ಸೇರುವುದರಿಂದ ವಿನಾಯಿತಿ ನೀಡುವುದಕ್ಕಾಗಿ ಅಕ್ಬರ್‌ ಆಳ್ವಿಕೆಯಲ್ಲಿ ಮುಸ್ಲಿಮೇತರರಿಗೆ ‘ಜಿಜಿಯಾ’ ಎಂಬ ತೆರಿಗೆ ವಿಧಿಸಲಾಗುತ್ತಿತ್ತು. ಇಸ್ಲಾಮ್‌ಗೆ ಮತಾಂತರಗೊಂಡವರಿಗೆ ಪ್ರೋತ್ಸಾಹಧನ ನೀಡುವುದಕ್ಕಾಗಿ ಈ ತೆರಿಗೆ ಹಣ ಬಳಕೆಯಾಗುತ್ತಿತ್ತು ಎಂಬ ಮಾಹಿತಿ ಇದೆ. 

* ಭಾರತೀಯ ಸಮಾಜದಿಂದ ಆಗ ಹೊಂದಿಕೊಳ್ಳುವ ಗುಣ ವ್ಯಕ್ತವಾಗಿತ್ತು. ಪಟ್ಟಣಗಳು ನಗರಗಳು ದೇವಸ್ಥಾನಗಳಲ್ಲದೇ ಅರ್ಥವ್ಯವಸ್ಥೆಯ ಮರುನಿರ್ಮಾಣದ ಮೂಲಕ  ಭಾರತೀಯ ಸಮಾಜವು ತನ್ನಲ್ಲಿನ ಪುಟಿದೇಳುವ ಗುಣವನ್ನು ಪ್ರದರ್ಶಿಸಿತು

* ‘ಶಿವಾಜಿ ಮಹಾರಾಜ್‌ ಮಹಾನ್‌ ತಂತ್ರಗಾರ’ ಎಂದು ಬಣ್ಣಿಸಲಾಗಿದೆ. ಹಿಂದೂ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿಯುವ ಜೊತೆಗೆ ಇತರ ಧರ್ಮಗಳನ್ನು ಗೌರವಿಸುತ್ತಿದ್ದ ಎಂದು ವಿವರಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.