ADVERTISEMENT

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಎನ್‌ಸಿಪಿ ಮುಖಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ನವೆಂಬರ್ 2022, 6:00 IST
Last Updated 14 ನವೆಂಬರ್ 2022, 6:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಎನ್‌ಸಿಪಿ ಶಾಸಕ ಮತ್ತು ಮಾಜಿ ಮಂತ್ರಿ ಜಿತೇಂದ್ರ ಅವ್ಹಾದ್‌ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸುವುದಾಗಿ ಸೋಮವಾರ ಹೇಳಿದ್ದಾರೆ. ಪೊಲೀಸರು ತಮ್ಮ ಮೇಲೆ ನಕಲಿ ಪ್ರಕರಣ ದಾಖಲಿಸಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.

ಮಹಿಳೆಯೊಬ್ಬರ ದೂರನ್ನು ಆಧರಿಸಿ ಥಾಣೆಯ ಮುಂಬ್ರ ಪೊಲೀಸರು ಭಾನುವಾರ ತಡರಾತ್ರಿ ಜಿತೇಂದ್ರ ಅವರ ಮೇಲೆ ಐಪಿಸಿ 354ರ ಅಡಿಯಲ್ಲಿ(ಮಹಿಳೆ ಮೇಲೆ ದೌರ್ಜನ್ಯ) ಪ್ರಕರಣ ದಾಖಲಿಸಿದ್ದರು.

ಭಾನುವಾರ ಮುಂಬ್ರದಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯ ಬಳಿಕ ಜನಸಂದಣಿಯಿಂದ ದಾರಿ ಮಾಡಿಕೊಳ್ಳುತ್ತಿದ್ದ ಮಹಿಳೆಯನ್ನು ಎನ್‌ಸಿಪಿ ಮುಖಂಡ ಜಿತೇಂದ್ರ ತಳ್ಳಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಛತ್ರಪತಿ ಶಿವಾಜಿ ಇತಿಹಾಸ ತಿರುಚಲಾಗಿದೆ ಎಂದು ಮಾಲ್‌ನಲ್ಲಿ ಗಲಾಟೆ ಮಾಡಿದ ಪ್ರಕರಣದಲ್ಲಿ ಮುಂಬ್ರ–ಥಾಣೆ ಶಾಸಕ‌ರಾದ ಜಿತೇಂದ್ರ ಅವರನ್ನು ಶುಕ್ರವಾರ ಬಂಧಿಸಲಾಗಿತ್ತು. ಶನಿವಾರ ಈ ಪ್ರಕರಣದಲ್ಲಿ ಜಾಮೀನು ದೊರೆತಿತ್ತು.

ADVERTISEMENT

ಈ ಬಗ್ಗೆ ಟ್ವೀಟ್‌ ಮಾಡಿರುವ ಜಿತೇಂದ್ರ,‘ಪೊಲೀಸರು ನನ್ನ ವಿರುದ್ಧ 2 ನಕಲಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವೆ. ಪೊಲೀಸರ ದೌರ್ಜನ್ಯದ ವಿರುದ್ಧ ಹೋರಾಡುವೆ. ಪ್ರಜಾಪ್ರಭುತ್ವದ ಕೊಲೆಯಾಗುತ್ತಿರುವುದನ್ನು ನೋಡಲಾರೆ’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಅವ್ಹಾದ್‌ ರಾಜೀನಾಮೆ ನೀಡಿದರೆ ಆ ಕ್ಷೇತ್ರವನ್ನು ಗೆಲ್ಲುವುದಾಗಿ ಹೇಳಿದೆ. ಅವ್ಹಾದ್‌ ಈ ನಡೆಯನ್ನು ಗಿಮ್ಮಿಕ್‌ ಎಂದು ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.