ADVERTISEMENT

ರಾಷ್ಟ್ರಪತಿ ಆಳ್ವಿಕೆಯತ್ತ ಮಹಾರಾಷ್ಟ್ರ: ಸುಪ್ರೀಂ ಮೊರೆ ಹೋಗಲಿರುವ ಶಿವಸೇನಾ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 9:11 IST
Last Updated 12 ನವೆಂಬರ್ 2019, 9:11 IST
ಭಗತ್ ಸಿಂಗ್ ಕೋಶಿಯಾರಿ
ಭಗತ್ ಸಿಂಗ್ ಕೋಶಿಯಾರಿ   

ಮುಂಬೈ: ಮಹಾರಾಷ್ಟ್ರದಲ್ಲಿರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರ್ ಅವರು ಈಗಾಗಲೇ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿರುವ ಹಿನ್ನೆಲೆಯಲ್ಲಿ ಸುರ್ಪೀಂ ಕೋರ್ಟ್ ಮೊರೆ ಹೋಗಲು ಶಿವಸೇನಾ ನಿರ್ಧರಿಸಿದೆ.

ಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಈ ಕುರಿತು ಟ್ವೀಟ್ ಮಾಡಿದ್ದು, ಸ್ವತಃ ರಾಜ್ಯಪಾಲರೇ ಎನ್‌ಸಿಪಿಗೆ ಸರ್ಕಾರ ರಚನೆಗೆ ನೀಡಿರುವ ಆಹ್ವಾನದ ಕಾಲಾವಧಿ ರಾತ್ರಿ 8.30ಕ್ಕೆ ಕೊನೆಗೊಳ್ಳಲಿದೆ. ಹೀಗಿರುವಾಗ ಅವರೇ ಹೇಗೆ ಇದನ್ನು ಮುರಿಯುತ್ತಾರೆಎಂದು ಪ್ರಶ್ನಿಸಿದ್ದಾರೆ.

ಏಕೈಕ ಅತಿದೊಡ್ಡ ಪಕ್ಷವಾಗಿದ್ದ ಬಿಜೆಪಿಯನ್ನು ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು. ಆದರೆ ಸರ್ಕಾರ ರಚನೆಯಿಂದ ಬಿಜೆಪಿ ಹಿಂದೆ ಸರಿದ ಬೆನ್ನಲ್ಲೇ ಎರಡನೇ ಅತಿದೊಡ್ಡ ಪಕ್ಷವಾಗಿರುವ ಶಿವಸೇನಾಗೆ ರಾಜ್ಯಪಾಲರು ಆಹ್ವಾನ ನೀಡಿದ್ದರು. ಎನ್‌ಸಿಪಿ ಮತ್ತು ಕಾಂಗ್ರೆಸ್‌ ಬೆಂಬಲದೊಂದಿಗೆ ಸರ್ಕಾರ ರಚಿಸುವ ಇರಾದೆ ಹೊಂದಿದ್ದ ಸೇನಾ, ಕೊನೆಗಳಿಗೆಯ ಕಾಂಗ್ರೆಸ್ ನಿರ್ಧಾರದಿಂದ ರಾಜ್ಯಪಾಲರ ಆಹ್ವಾನಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗಿರಲಿಲ್ಲ. ಬದಲಿಗೆ ಹೆಚ್ಚುವರಿ ಸಮಯ ನೀಡುವಂತೆ ರಾಜ್ಯಪಾಲರನ್ನು ಕೇಳಿತ್ತು. ಆದರೆ ಇದಕ್ಕೆ ನಿರಾಕರಿಸಿದ್ದರು.

ADVERTISEMENT

ಇದರಿಂದಾಗಿ, ಮೂರನೇ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿರುವ ಎನ್‌ಸಿಪಿಗೆ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಸೋಮವಾರ ರಾತ್ರಿ ಆಹ್ವಾನ ನೀಡಿದ್ದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಶಿಫಾರಸು ಮಾಡಲಾಗಿದೆ ಎಂಬ ವದಂತಿಯ ಬೆನ್ನಲ್ಲೇಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ಬಿಸಿ ಬಿಸಿ ಚರ್ಚೆ ಏರ್ಪಟ್ಟಿದೆ. ಒಂದು ವೇಳೆ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದ್ದೇ ಆದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸೇನಾ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಹ್ಮದ್ ಪಟೇಲ್ ಅವರೊಂದಿಗೆ ಉದ್ಧವ್ ಠಾಕ್ರೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ರಾಜ್ಯಪಾಲರ ಕಚೇರಿಯಿಂದ ಸ್ಪಷ್ಟನೆ ಬಂದಿದ್ದು, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿಲ್ಲ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.