ADVERTISEMENT

ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್‌ಗೆ ಪಿತ್ತಕೋಶ ಶಸ್ತ್ರಚಿಕಿತ್ಸೆ

ಏಜೆನ್ಸೀಸ್
Published 31 ಮಾರ್ಚ್ 2021, 4:48 IST
Last Updated 31 ಮಾರ್ಚ್ 2021, 4:48 IST
ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್
ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್   

ಮುಂಬೈ: ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರಿಗೆ ನಡೆಸಲಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ.

ಆಪರೇಷನ್ ನಂತರ ಶರದ್ ಪವಾರ್ ಉತ್ತಮವಾಗಿದ್ದಾರೆ. ಪಿತ್ತಕೋಶದಿಂದ ಕಲ್ಲನ್ನು ಯಶಸ್ವಿಯಾಗಿ ತೆಗೆಯಲಾಗಿದೆ. ಎಂಡೋಸ್ಕೋಪಿ ವಿಧಾನದ ಮೂಲಕಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದವರು ವರದಿಗಾರರಿಗೆ ತಿಳಿಸಿದ್ದಾರೆ.

ವೈದ್ಯ ಅಮಿತ್ ಮೇಡಿಯೊ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ಬಳಿಕ ಸಮಸ್ಯೆಗಳು ಕಂಡುಬಂದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದ್ದೆವು. ಈ ಆಪರೇಷನ್ ಪ್ರಕ್ರಿಯೆಗೆ ಒಂದೂವರೆ ತಾಸು ಬೇಕಾಯಿತು. ಪಿತ್ತಕೋಶದಿಂದ ಕಲ್ಲನ್ನು ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಶರದ್ ಪವಾರ್ ಆರೋಗ್ಯ ಉತ್ತಮವಾಗಿದ್ದು, ಬಳಿಕ ವೈದ್ಯಕೀಯ ತಜ್ಞರು ನಿಗಾವಹಿಸಿದ್ದಾರೆ ಎಂದು ವೈದ್ಯರು ವಿವರಿಸಿದ್ದಾರೆ.

ಪಿತ್ತಕೋಶದ ಕಾಯಿಲೆಯಿಂದ ಬಳಲುತ್ತಿರುವ ಶರದ್ ಪವಾರ್ ಅವರಿಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

80 ವರ್ಷದ ಪವಾರ್ ಅವರಿಗೆ ಹೊಟ್ಟೆಯಲ್ಲಿ ನೋವು ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂಬುದನ್ನು ಕುಟುಂಬ ಮೂಲಗಳು ಖಚಿತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.