ADVERTISEMENT

ಮೈಸೂರು ಗ್ಯಾಂಗ್ ರೇಪ್;ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಎನ್‌ಸಿಡಬ್ಲ್ಯು ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 14:10 IST
Last Updated 26 ಆಗಸ್ಟ್ 2021, 14:10 IST
ರೇಖಾ ಶರ್ಮಾ
ರೇಖಾ ಶರ್ಮಾ   

ನವದೆಹಲಿ: ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಗುರುವಾರ ಕರ್ನಾಟಕ ಪೊಲೀಸರಿಗೆ ಸೂಚಿಸಿದೆ.

ಮಾಧ್ಯಮ ವರದಿ ಗಮನಿಸಿ ಎನ್‌ಸಿಡಬ್ಲ್ಯೂ ಅಧ್ಯಕ್ಷರು, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳನ್ನು ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಘಟನೆಯ ಬಗ್ಗೆ ಎನ್‌ಸಿಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ ಅವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರೊಂದಿಗೂ ಚರ್ಚಿಸಿದ್ದಾರೆ.

ADVERTISEMENT

ಕ್ರಿಮಿನಲ್ ಪ್ರೊಸೀಜರ್ ಕೋಡ್ 1972ರ ಸೆಕ್ಷನ್ 357 ಎ ಅಡಿಯಲ್ಲಿ ಸಂತ್ರಸ್ತ ಪರಿಹಾರ ಯೋಜನೆಯ ನಿಯಮಗಳ ಪ್ರಕಾರ ಸಂತ್ರಸ್ತೆಗೆ ಅಗತ್ಯ ಪರಿಹಾರ ಒದಗಿಸುವ ಪ್ರಕ್ರಿಯೆ ಆರಂಭಿಸಲು ಆಯೋಗವು ಸೂಚಿಸಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಂತ್ರಸ್ತೆಗೆ ವೈದ್ಯಕೀಯ ಮತ್ತು ಸಮಾಲೋಚನೆಯ ನೆರವು ನೀಡುವಂತೆ, ಈ ಪ್ರಕರಣದಲ್ಲಿ ಕೈಗೊಂಡ ಕ್ರಮದ ಬಗ್ಗೆ ಆದಷ್ಟು ಶೀಘ್ರ ಆಯೋಗಕ್ಕೆ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಎನ್‌ಸಿಡಬ್ಲ್ಯು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.