ಗಲಭೆ ಪೀಡಿದ ಪ್ರದೇಶದಲ್ಲಿ ಭದ್ರತಾ ಪಡೆಗಳ ಕಾವಲು
– ಪಿಟಿಐ
ಕೋಲ್ಕತ್ತ: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ಶುಕ್ರವಾರದಿಂದ ಪಶ್ಚಿಮ ಬಂಗಾಳದ ಮಾಲ್ಡಾ ಮತ್ತು ಮುರ್ಶಿದಾಬಾದ್ ಜಿಲ್ಲೆಗಳಿಗೆ ಎರಡು ದಿನಗಳ ಪ್ರವಾಸ ಮಾಡಲಿದ್ದಾರೆ.
ನಿರಾಶ್ರಿತರ ಶಿಬಿರ, ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಇತ್ತೀಚೆಗೆ ನಡೆದ ಕೋಮು ಹಿಂಸಾಚಾರ ನಡೆದ ಸ್ಥಳಗಳ ವಾಸ್ತವ ಸ್ಥಿತಿಯನ್ನು ಅವಲೋಕನ ನಡೆಸಲಿದ್ದಾರೆ. ಸಂತ್ರಸ್ತ ಮಹಿಳೆಯರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಏಪ್ರಿಲ್ 11 ಮತ್ತು 12 ರಂದು ಮುರ್ಶಿದಾಬಾದ್‌ನ ಕೆಲವು ಭಾಗಗಳಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಆಯೋಗವು ಈಗಾಗಲೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ತನಿಖಾ ಸಮಿತಿಯನ್ನೂ ರಚಿಸಿದೆ ಎಂದು ರಹತ್ಕರ್ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಸಂತ್ರಸ್ತ ಮಹಿಳೆಯರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ವರದಿಗಳು ನಮಗೆ ಬಂದಿವೆ. ಪರಿಹಾರ ಶಿಬಿರಗಳಿಗೆ ಹೋಗಿ ಅಲ್ಲಿನ ಮಹಿಳೆಯರೊಂದಿಗೆ ಮಾತನಾಡುತ್ತೇವೆ. ಪರಿಸ್ಥಿತಿ ಅವಲೋಕಿಸಿ ವಿವರವಾದ ವರದಿಯನ್ನು ಸಲ್ಲಿಸುತ್ತೇವೆ’ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಆಯೋಗದ ತಂಡವು ಮೊದಲು ಮಾಲ್ಡಾಕ್ಕೆ ಭೇಟಿ ನೀಡಿ ಅಲ್ಲಿ ಪರಿಹಾರ ಶಿಬಿರಗಳನ್ನು ಪರಿಶೀಲಿಸಲಿದೆ. ಸಂತ್ರಸ್ತ ಮಹಿಳೆಯರನ್ನು ಮಾತನಾಡಿಸಲಿದೆ. ತಂಡವು ರಾಜ್ಯ ಸರ್ಕಾರದ ಪುನರ್ವಸತಿ ಕ್ರಮಗಳನ್ನು ಪರಿಶೀಲಿಸಲು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳನ್ನು ಸಹ ಭೇಟಿ ಮಾಡಲಿದೆ.
‘ತಂಡವು ರಾತ್ರಿ ಮಾಲ್ಡಾದಲ್ಲಿ ತಂಗಲಿದ್ದು, ಶನಿವಾರ ಬೆಳಿಗ್ಗೆ ಮುರ್ಶಿದಾಬಾದ್‌ಗೆ ತೆರಳಲಿದೆ. ಮುರ್ಶಿದಾಬಾದ್‌ನಲ್ಲಿ, ಜಿಲ್ಲಾ ಮ್ಯಾಜಿಸ್ಟ್ರೇಟ್, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.
ಭಾನುವಾರ, ತಂಡವು ಪಶ್ಚಿಮ ಬಂಗಾಳ ರಾಜ್ಯಪಾಲರು, ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಕೋಲ್ಕತ್ತದಲ್ಲಿ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.