ನರೇಂದ್ರ ಮೋದಿ, ನಿತೀಶ್ ಕುಮಾರ್
(ಪಿಟಿಐ ಚಿತ್ರ)
ನವದೆಹಲಿ: '2025ರಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲೇ ಎನ್‌ಡಿಎ ಸ್ಪರ್ಧಿಸಲಿದೆ' ಎಂದು ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಇಂದು (ಭಾನುವಾರ) ತಿಳಿಸಿದ್ದಾರೆ.
ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿತೀಶ್ ಕುಮಾರ್ ಅವರನ್ನು ನಾಯಕರನ್ನಾಗಿ ಬಿಂಬಿಸುವ ಕುರಿತು ಎನ್‌ಡಿಎ ಮರುಚಿಂತನೆ ಮಾಡಬಹುದೇ ಎಂದು ಕೇಳಿದಾಗ, 'ಈ ಕುರಿತು ಯಾವುದೇ ಗೊಂದಲವಿಲ್ಲ' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದೆಯೇ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿತ್ತು.
ಇತ್ತೀಚೆಗೆ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈ ಕುರಿತು ಕೇಳಲಾಗಿತ್ತು. ಮಹಾರಾಷ್ಟ್ರದಂತೆ ಬಿಹಾರದಲ್ಲೂ ಸಿಎಂ ಅಭ್ಯರ್ಥಿಯನ್ನು ಘೋಷಿಸದೇ ಎನ್‌ಡಿಎ ಚುನಾವಣೆ ಎದುರಿಸಲಿದೆಯೇ ಎಂದು ಪ್ರಶ್ನಿಸಲಾಗಿತ್ತು.
'ಈ ಕುರಿತು ಎಲ್ಲರೂ ಒಟ್ಟಿಗೆ ಕುರಿತು ಚರ್ಚಿಸುತ್ತೇವೆ. ನಿರ್ಧಾರ ತೆಗೆದುಕೊಂಡ ಬಳಿಕ ನಿಮಗೆ ತಿಳಿಸುತ್ತೇವೆ' ಎಂದು ಅಮಿತ್ ಶಾ ಪ್ರತಿಕ್ರಿಯಿಸಿದ್ದರು.
2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸದಂತೆ ಬಿಜೆಪಿ ಒತ್ತಡ ಹೇರುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು.
ಆದರೆ ಈ ಎಲ್ಲ ವರದಿಗಳನ್ನು ನಿರಾಕರಿಸಿರುವ ಚೌಧರಿ, 'ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿ ನಾಯಕತ್ವದಲ್ಲಿ ಎನ್‌ಡಿಎ ಕೆಲಸ ಮಾಡುತ್ತಿದೆ. ಅವರಿಬ್ಬರ ನಾಯಕತ್ವದಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ' ಎಂದು ಹೇಳಿದ್ದಾರೆ.
2020ರಲ್ಲೂ ಎನ್‌ಡಿಎ ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ನಿತೀಶ್ ಅವರನ್ನು ಘೋಷಿಸಿದ ನಂತರವೇ ಚುನಾವಣೆ ಎದುರಿಸಲಾಗಿತ್ತು. ಈಗಲೂ ಬಿಹಾರದ ಎನ್‌ಡಿಎ ನಾಯಕರನ್ನಾಗಿ ನಿತೀಶ್ ಅವರನ್ನೇ ಪರಿಗಣಿಸಿದ್ದೇವೆ. ಭವಿಷ್ಯದಲ್ಲೂ ನಿತೀಶ್ ಹಾಗೂ ಮೋದಿ ನಾಯಕತ್ವದಲ್ಲೇ ಸ್ಪರ್ಧಿಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
243 ಸದಸ್ಯ ಬಲದ ಬಿಹಾರದಲ್ಲಿ 2025ರ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.