ADVERTISEMENT

ತಮಿಳುನಾಡು: ಜ. 23ಕ್ಕೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್‍ಯಾಲಿ

ಪಿಟಿಐ
Published 14 ಜನವರಿ 2026, 14:53 IST
Last Updated 14 ಜನವರಿ 2026, 14:53 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ </p></div>

ಪ್ರಧಾನಿ ನರೇಂದ್ರ ಮೋದಿ

   

(ಸಂಗ್ರಹ ಚಿತ್ರ) 

ಚೆನ್ನೈ: ಚುನಾವಣೆ ಹೊಸ್ತಿಲಿನಲ್ಲಿರುವ ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 23ರಂದು ಸಾರ್ವಜನಿಕ ರ‍್ಯಾಲಿ ನಡೆಸಲಿದ್ದಾರೆ. ಎನ್‌ಡಿಎ ಒಕ್ಕೂಟದ ನಾಯಕರ ಜತೆಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಇಲ್ಲಿ ಚುನಾವಣಾ ಪ್ರಚಾರಕ್ಕೆ ಬಿರುಸಿನ ಚಾಲನೆ ನೀಡಲಿದ್ದಾರೆ.

ADVERTISEMENT

2025ರ ಏಪ್ರಿಲ್‌ನಲ್ಲಿ ಎಐಎಡಿಎಂಕೆ–ಬಿಜೆಪಿ ಮತ್ತೆ ಮೈತ್ರಿ ಘೋಷಿಸಿದ ಬಳಿಕ ಇದೇ ಮೊದಲ ಬಾರಿಗೆ ಎನ್‌ಡಿಎ ನಾಯಕರೆಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಎನ್‌ಡಿಎ ಕೂಟವು ಒಗ್ಗಟ್ಟಿನ ಬಲ ಪ್ರದರ್ಶಿಸಲು ಸಜ್ಜುಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಭಿನ್ನರಾಗದಿಂದಾಗಿ ಡಿಎಂಕೆ ನೇತೃತ್ವದ ಸೆಕ್ಯುಲರ್‌ ಪ್ರೊಗ್ರೆಸಿವ್‌ ಅಲಯನ್ಸ್‌ನಲ್ಲಿ (ಎಸ್‌ಪಿಎ) ಆಂತರಿಕ ಭಿನ್ನಾಭಿಪ್ರಾಯ ಎದುರಾಗಬಹುದು ಎಂಬ ಸೂಚನೆಗಳ ನಡುವೆಯೇ ಎನ್‌ಡಿಎ ಕೂಟದ ಈ ನಡೆ ಗಮನಸೆಳೆದಿದೆ.

ಕಳೆದ ವಾರವಷ್ಟೇ ಪಿಎಂಕೆ ಪಕ್ಷವು ಎನ್‌ಡಿಎ ಕೂಟ ಸೇರಿದೆ. ಈಗ ಟಿ.ಟಿ.ವಿ. ದಿನಕರನ್‌ ಅವರ ಎಎಂಎಂಕೆ ಹಾಗೂ ಡಿಎಂಡಿಕೆ ಪಕ್ಷಗಳನ್ನೂ ಎನ್‌ಡಿಎಗೆ ಸೇರ್ಪಡೆಗೊಳಿಸಲು ಬಿಜೆಪಿ ಕಸರತ್ತು ಮಾಡುತ್ತಿದೆ. 

ಎಐಎಡಿಎಂಕೆ ಮುಖ್ಯಸ್ಥರಾದ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಒಪ್ಪಲು ತಯಾರಿಲ್ಲದ ದಿನಕರನ್‌ ಅವರ ಮನವೊಲಿಸುವುದೇ ಬಿಜೆಪಿಗೆ ಸವಾಲಾಗಿದೆ. ನಟ ವಿಜಯ್‌ ಅವರ ಟಿವಿಕೆ ಸೇರ್ಪಡೆಗೊಳ್ಳುವ ಇರಾದೆಯೂ ದಿನಕರನ್‌ ಅವರಿಗಿದ್ದು, ಅವರ ಜತೆಗೆ ಈಗಾಗಲೇ ಬಿಜೆಪಿ ಮಾತುಕತೆ ನಡೆಸಿದೆ ಎಂದೂ ಮೂಲಗಳಿಂದ ತಿಳಿದುಬಂದಿದೆ. 

ಇತ್ತ,‌ ಎಐಎಡಿಎಂಕೆಯ ಮತ್ತೊಬ್ಬ ಪ್ರಬಲ ವಿರೋಧಿಯಾಗಿರುವ ಒ.ಪಳನಿಸ್ವಾಮಿ ಅವರ ಮನವೊಲಿಸಿ, ಬಿಜೆಪಿ ಜತೆಗೆ ಬಹುಕಾಲದಿಂದ ಇದ್ದ ಅವರನ್ನು ಕೈಬಿಡಲಾಗಿದೆ ಎಂಬ ಆರೋಪಕ್ಕೆ ಆಸ್ಪದ ನೀಡದಂತೆ ವ್ಯವಹರಿಸಲು ಬಿಜೆಪಿ ಯತ್ನಿಸುತ್ತಿದೆ ಎಂದೂ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.