ADVERTISEMENT

ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಸಿ.ಪಿ.ರಾಧಾಕೃಷ್ಣನ್: ಯಾರಿವರು?

ಪಿಟಿಐ
Published 17 ಆಗಸ್ಟ್ 2025, 18:42 IST
Last Updated 17 ಆಗಸ್ಟ್ 2025, 18:42 IST
<div class="paragraphs"><p>ಸಿ.ಪಿ.ರಾಧಾಕೃಷ್ಣನ್</p></div>

ಸಿ.ಪಿ.ರಾಧಾಕೃಷ್ಣನ್

   

ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಸಿ.ಪಿ.ರಾಧಾಕೃಷ್ಣನ್: ಯಾರಿವರು?

ನವದೆಹಲಿ: ತಮಿಳುನಾಡಿನ ಬಿಜೆಪಿ ನಾಯಕ, ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದಿರುವ ಸಿ.ಪಿ. ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಭಾನುವಾರ ಆಯ್ಕೆ ಮಾಡಲಾಗಿದೆ.

ADVERTISEMENT

ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ರಾಧಾಕೃಷ್ಣನ್ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂತಿಮಗೊಳಿಸಲಾಯಿತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದರು.

ಒಬಿಸಿ ನಾಯಕ ಮತ್ತು ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ರಾಧಾಕೃಷ್ಣನ್ (67) ಅವರನ್ನು ವಿರೋಧ ಪಕ್ಷಗಳು ಬೆಂಬಲಿಸಬಹುದು ಎಂದು ನಡ್ಡಾ ಆಶಿಸಿದ್ದಾರೆ. ‘ಮುಂದಿನ ಉಪರಾಷ್ಟ್ರಪತಿಯನ್ನು ಒಮ್ಮತದಿಂದ ಆಯ್ಕೆ ಮಾಡಬೇಕೆಂದು ಬಯಸುತ್ತೇವೆ. ನಾವು ವಿರೋಧ ಪಕ್ಷಗಳ ನಾಯಕರ ಜತೆ ಮಾತನಾಡಿದ್ದೇವೆ’ ಎಂದು ನಡ್ಡಾ ಹೇಳಿದರು.

ಜಗದೀಪ್ ಧನಕರ್ ಅವರು ಕಳೆದ ತಿಂಗಳು ರಾಜೀನಾಮೆ ನೀಡಿದ್ದರಿಂದ ಉಪರಾಷ್ಟ್ರಪತಿ ಹುದ್ದೆ ತೆರವಾಗಿತ್ತು. ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ಆಗಸ್ಟ್ 22 ಕೊನೆಯ ದಿನಾಂಕ ಆಗಿದೆ.

ಎನ್‌ಡಿಎ ಮೈತ್ರಿಕೂಟವು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತ ಹೊಂದಿರುವುದರಿಂದ ರಾಧಾಕೃಷ್ಣನ್‌ ಆಯ್ಕೆ ಬಹುತೇಕ ಖಚಿತವಾಗಿದೆ. ಅವರ ಆಯ್ಕೆಯು ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ ಪಕ್ಷಕ್ಕೆ ಬಲ ತುಂಬಲಿದೆ ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ. ರಾಧಾಕೃಷ್ಣನ್ ಅವರು ತಮಿಳುನಾಡಿನಲ್ಲಿ ಪ್ರಭಾವಿ ಗೌಂಡರ್ ಜಾತಿಗೆ ಸೇರಿದವರು. ಇದು ಒಬಿಸಿ ಸಮುದಾಯವಾಗಿದೆ.

ಸಿ.ಪಿ ರಾಧಾಕೃಷ್ಣನ್ ಅವರು ಯಾವಾಗಲೂ ಸಮುದಾಯ ಸೇವೆಯತ್ತ ಗಮನಹರಿಸಿದ್ದಾರೆ. ಎನ್‌ಡಿಎ ಅವರನ್ನು ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಸಂತಸ ಉಂಟುಮಾಡಿದೆ

-ನರೇಂದ್ರ ಮೋದಿ ಪ್ರಧಾನಿ

ಯಾರಿವರು ರಾಧಾಕೃಷ್ಣನ್?

1957ರಲ್ಲಿ ತಮಿಳುನಾಡಿನ ತಿರುಪ್ಪೂರ್‌ನಲ್ಲಿ ಜನಿಸಿದ ರಾಧಾಕೃಷ್ಣನ್ ಅವರು 2024ರ ಜುಲೈನಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ * ಅವರು ಈ ಹಿಂದೆ 2023ರ ಫೆಬ್ರುವರಿಯಿಂದ 2024ರ ಜುಲೈವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಕೆಲಸ ಮಾಡಿದ್ದರು   * ಜಾರ್ಖಂಡ್‌ನ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ತೆಲಂಗಾಣದ ರಾಜ್ಯಪಾಲ ಮತ್ತು ಪುದುಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಹೆಚ್ಚುವರಿ ಹೊಣೆ ವಹಿಸಿಕೊಂಡಿದ್ದರು  * 1998ರಲ್ಲಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು 1999ರಲ್ಲಿ ಅದೇ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದರು  * 2004ರಿಂದ 2007ರ ವರೆಗೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2020ರಿಂದ 2022ರ ವರೆಗೆ ಬಿಜೆಪಿ ಕೇರಳ ಘಟಕದ ಉಸ್ತುವಾರಿಯಾಗಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.