ADVERTISEMENT

ಪ್ರವಾಹಕ್ಕೆ ಬಿಹಾರ ತತ್ತರ; 11 ಜಿಲ್ಲೆಗಳ ಅಂದಾಜು 15 ಲಕ್ಷ ಮಂದಿಗೆ ಸಂಕಷ್ಟ

ಪಿಟಿಐ
Published 26 ಜುಲೈ 2020, 19:30 IST
Last Updated 26 ಜುಲೈ 2020, 19:30 IST
ಪ್ರವಾಹದಿಂದಾಗಿ ದರ್ಭಾಂಗ ಜಿಲ್ಲೆಯ ಹಲವು ಪ್ರದೇಶಗಳು ಜಲಾವೃತವಾಗಿರುವುದು –ಪಿಟಿಐ ಚಿತ್ರ 
ಪ್ರವಾಹದಿಂದಾಗಿ ದರ್ಭಾಂಗ ಜಿಲ್ಲೆಯ ಹಲವು ಪ್ರದೇಶಗಳು ಜಲಾವೃತವಾಗಿರುವುದು –ಪಿಟಿಐ ಚಿತ್ರ    

ಪಟ್ನಾ: ‘ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, 11 ಜಿಲ್ಲೆಗಳ ಅಂದಾಜು 15 ಲಕ್ಷ ಮಂದಿ ತೊಂದರೆಗೆ ಒಳಗಾಗಿದ್ದಾರೆ’ ಎಂದು ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿ ಭಾನುವಾರ ತಿಳಿಸಿದೆ.

ದರ್ಭಾಂಗ ಜಿಲ್ಲೆಯಲ್ಲಿ ಒಟ್ಟು 5.36 ಲಕ್ಷ ಜನ ಪ್ರವಾಹದಿಂದ ಬಾಧಿತರಾಗಿದ್ದಾರೆ. ಈ ಜಿಲ್ಲೆಯ ಬಿಷಣ್‌ಪುರ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ.

‘ಪ್ರವಾಹ ನಮಗೇನೂ ಹೊಸತಲ್ಲ. ಪ್ರತಿ ವರ್ಷವೂ ನಮಗೆ ಅದರ ಅನುಭವವಾಗುತ್ತದೆ. ಆದರೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಹಾನಿಯಾಗಿದೆ’ ಎಂದು ಬಿಷಣ್‌ಪುರ ಗ್ರಾಮದ ನಿವಾಸಿಯೊಬ್ಬರು ಹೇಳಿದ್ದಾರೆ.

ADVERTISEMENT

ಮಾಬಿ ಗ್ರಾಮದ ಮನೆಗಳಿಗೂ ನೀರು ನುಗ್ಗಿದ್ದರಿಂದ ಅಲ್ಲಿನ ಜನರೆಲ್ಲಾ ಈಗ ಬೀದಿಗೆ ಬಿದ್ದಿದ್ದಾರೆ.

ಎನ್‌ಡಿಆರ್‌ಎಫ್‌ನ 17 ಹಾಗೂ ಎಸ್‌ಡಿಆರ್‌ಎಫ್‌ನ ಎಂಟು ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಇದುವರೆಗೂ ಒಟ್ಟು 1.36 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರಿಗೆ ಹೆಲಿಕಾ‍ಪ್ಟರ್‌ಗಳ ನೆರವಿನಿಂದ ಆಹಾರ ಸಾಮಾಗ್ರಿಗಳನ್ನು ಪೂರೈಸಲಾಗುತ್ತಿದೆ.

ಭಾಗಮತಿ, ಬುರ್ಹಿ ಗಂಡಕ್‌, ಕಮಲಬಾಲನ್‌, ಲಾಲ್‌ಬಕೆಯಾ, ಅಧ್ವಾರ, ಮಹಾನಂದ ಸೇರಿದಂತೆ ಹಲವು ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.