ADVERTISEMENT

ದೇಶದಾದ್ಯಂತ 23 ಲಕ್ಷ ಜನರಿಗೆ ಕ್ವಾರಂಟೈನ್

ಪಿಟಿಐ
Published 28 ಮೇ 2020, 20:36 IST
Last Updated 28 ಮೇ 2020, 20:36 IST
ಮುಂಬೈನಲ್ಲಿರುವ ಕ್ವಾರಂಟೈನ್ ಕೇಂದ್ರ
ಮುಂಬೈನಲ್ಲಿರುವ ಕ್ವಾರಂಟೈನ್ ಕೇಂದ್ರ   

ನವದೆಹಲಿ: ವಿದೇಶಗಳಿಂದ ಬಂದವರು ಸೇರಿದಂತೆ ದೇಶದಾದ್ಯಂತ ಸುಮಾರು 23 ಲಕ್ಷ ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಸ್ತುತ ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿವೆ.

ಬಹುತೇಕ ರಾಜ್ಯಗಳು ತಮ್ಮ ರಾಜ್ಯಗಳಿಗೆ ಆಗಮಿಸುವವರಿಗೆ ಗರಿಷ್ಠ 7 ದಿನಗಳ ಕ್ವಾರಂಟೈನ್ ಕಡ್ಡಾಯಪಡಿಸಿವೆ. ಸುಮಾರು 11.95 ಲಕ್ಷ ಜನರಿಗೆ 12 ದಿನಗಳಿಗೂ ಅಧಿಕ ಕಾಲ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 6.02 ಲಕ್ಷ ಜನರಿಗೆ ಕ್ವಾರಂಟೈನ್ ಮಾಡಲಾಗಿದ್ದರೆ, ನಂತರದ ಸ್ಥಾನದಲ್ಲಿ ಗುಜರಾತ್ ಇದ್ದು, ಸುಮಾರು 4.42 ಲಕ್ಷ ಜನರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಸದ್ಯ ಮಹಾರಾಷ್ಟ್ರದಲ್ಲಿ 2.9 ಲಕ್ಷ, ಗುಜರಾತ್ ನಲ್ಲಿ 2 ಲಕ್ಷ ಜನರು ಕ್ವಾರಂಟೈನ್‌ನಲ್ಲಿ ಇದ್ದಾರೆ.

ADVERTISEMENT

ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಬುಧವಾರದವರೆಗೂ 91 ಲಕ್ಷ ವಲಸೆ ಕಾರ್ಮಿಕರನ್ನು ವಿವಿಧ ಸ್ಥಳಗಳಿಂದ ಅವರ ತವರು ರಾಜ್ಯಗಳಿಗೆ ಕರೆದೊಯ್ಯಲಾಗಿದೆ. ಅಂತೆಯೇ, ಜಗತ್ತಿನ ವಿವಿಧ ದೇಶಗಳಿಂದ ಸುಮಾರು 1 ಲಕ್ಷ ಭಾರತೀಯರನ್ನು ಕರೆತರಲು ಉದ್ದೇಶಿಸಲಾಗಿದೆ.

ಬಸ್‌, ರೈಲು ಹಾಗೂ ವಿಮಾನಗಳ ಮೂಲಕ ವಿವಿಧ ಕಡೆಯಿಂದ ತವರು ರಾಜ್ಯಗಳಿಗೆ ಮರಳಿದವರು ಕ್ವಾರಂಟೈನ್ ನಲ್ಲಿ ಇದ್ದಾರೆ. ಉತ್ತರ ಪ್ರದೇಶದಲ್ಲಿ ಗರಿಷ್ಠ ಕಾರ್ಮಿಕರು ಅಂದರೆ 3.6 ಲಕ್ಷ ಜನರು ಕ್ವಾರಂಟೈನ್‌ನಲ್ಲಿ ಇದ್ದಾರೆ. ನಂತರ ಸ್ಥಾನ ಬಿಹಾರದ್ದು, ಇಲ್ಲಿ 2.1 ಲಕ್ಷ ಜನ ಕ್ವಾರಂಟೈನ್‌ನಲ್ಲಿದ್ದಾರೆ.

ಮೇ 26ರ ಅಂಕಿ ಅಂಶಗಳ ಅನುಸಾರ, ಛತ್ತೀಸಗಡದಲ್ಲಿ 1.86 ಲಕ್ಷ, ಒಡಿಶಾದಲ್ಲಿ 1.18 ಲಕ್ಷ, ಜಾರ್ಖಂಡ್‌ನಲ್ಲಿ 88,536, ಪಂಜಾಬ್‌ನಲ್ಲಿ 37,618, ಜಮ್ಮು ಮತ್ತು ಕಾಶ್ಮೀರದಲ್ಲಿ 30,983, ಹಿಮಾಚಲ ಪ್ರದೇಶದಲ್ಲಿ 25,238, ರಾಜಸ್ಥಾನದಲ್ಲಿ 19,418 ಜನರು, ಆಂಧ್ರಪ್ರದೇಶದಲ್ಲಿ 14,930 ಜನರು, ಅಸ್ಸಾಂನಲ್ಲಿ 13,941, ಲಡಾಕ್‌ನಲ್ಲಿ 13,538 ಜನರು ಕ್ವಾರಂಟೈನ್‌ನಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.