ADVERTISEMENT

ಸಂಸ್ಕರಿಸದ ಕೊಳಚೆ ನೀರು ಗಂಗಾ ನದಿ ಸೇರುವುದು ನಿಂತಿಲ್ಲ: ಎನ್‌ಜಿಟಿ ಅಸಮಾಧಾನ

ಕೈಗೊಂಡ ಕ್ರಮದ ಬಗ್ಗೆ ಅ.14ರ ಒಳಗಾಗಿ ವರದಿ ಸಲ್ಲಿಸಲು ಸೂಚನೆ

ಪಿಟಿಐ
Published 24 ಜುಲೈ 2022, 11:41 IST
Last Updated 24 ಜುಲೈ 2022, 11:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದಶಕಗಳ ಕಾಲ ಮೇಲ್ವಿಚಾರಣೆ ನಡೆಸುತ್ತಿದ್ದರೂ, ಕೊಳಚೆ ನೀರು ಹಾಗೂ ಸಂಸ್ಕರಿಸದ ತ್ಯಾಜ್ಯಗಳು ಗಂಗಾ ನದಿಗೆ ಸೇರುತ್ತಲೇ ಇವೆ ಎಂದು ರಾಷ್ಡ್ರೀಯ ಹಸಿರು ನ್ಯಾಯ ಪೀಠ (ಎನ್‌ಜಿಟಿ) ಅಸಮಾಧಾನ ವ್ಯಕ್ತಪಡಿಸಿದೆ.

ಗಂಗಾ ನದಿಗೆ ಕೊಳಚೆ ನೀರು, ತ್ಯಾಜಗಳು ಸೇರುವುದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳ ಬಗ್ಗೆ ಮುಂದಿನ ವಿಚಾರಣೆ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದೇಶಕುಮಾರ್‌ ಗೋಯಲ್ ನೇತೃತ್ವದ ಪೀಠ ರಾಷ್ಟ್ರೀಯ ಗಂಗಾ ಮಂಡಳಿಗೆ (ಎನ್‌ಜಿಸಿ) ಸೂಚಿಸಿತು. ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿತು.

ಗಂಗಾ ನದಿ ನೀರಿನ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‌ನಡಿ (ಎನ್‌ಎಂಸಿಜಿ) ಕಠಿಣ ಕ್ರಮಗಳನ್ನು ಕೈಗೊಂಡಂತೆ ತೋರುತ್ತಿಲ್ಲ. ನದಿ ನೀರನ್ನು ಸ್ನಾನಕ್ಕೆ ಮಾತ್ರವಲ್ಲ ಧಾರ್ಮಿಕ ವಿಧಿಗೂ ಬಳಸಲಾಗುತ್ತದೆ. ಹೀಗಾಗಿ, ಮಾರ್ಗಸೂಚಿಗಳಲ್ಲಿ ಹೇಳಿರುವಂತೆ ಗಂಗಾ ನದಿ ನೀರು ಸ್ವಚ್ಛವಾಗಿರಬೇಕು ಎಂದು ನ್ಯಾಯಮೂರ್ತಿ ಗೋಯಲ್ ಹೇಳಿದರು.

ADVERTISEMENT

‘ಹಲವು ಸ್ಥಳಗಳಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕಿದೆ. ಕೆಲವೆಡೆ ಸ್ಥಾಪಿಸಿರುವ ಇಂಥ ಘಟಕಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ. ಈ ವಿಷಯದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಯುತ್ತಿಲ್ಲ. ಈ ವಿಳಂಬಕ್ಕೆ ಹೊಣೆಗಾರಿಕೆಯನ್ನು ಸಹ ನಿಗದಿಪಡಿಸಿಲ್ಲ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.