ADVERTISEMENT

ಬಿಜೆಪಿ ಪರ ಕೆಲಸ ಮಾಡುವ ನಾಯಕರನ್ನು ಕಾಂಗ್ರೆಸ್‌ನಿಂದ ಹೊರಗಿಡಬೇಕು: ರಾಹುಲ್ ಗಾಂಧಿ

ಪಿಟಿಐ
Published 8 ಮಾರ್ಚ್ 2025, 11:25 IST
Last Updated 8 ಮಾರ್ಚ್ 2025, 11:25 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

–ಪಿಟಿಐ ಚಿತ್ರ

ಅಹಮದಾಬಾದ್‌: ‘ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಬಿಜೆಪಿಗಾಗಿ ಕೆಲಸ ಮಾಡುವ ನಾಯಕರನ್ನು ಹೊರಗಿಡುವ ಅಗತ್ಯವಿದೆ’ ಎಂದು ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ತಿಳಿಸಿದರು. ‘ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ಪಕ್ಷದಿಂದಲೇ ತೆಗೆದುಹಾಕಲಾಗುವುದು’ ಎಂದರು.

ADVERTISEMENT

ಗುಜರಾತ್‌ ರಾಜ್ಯ ಪ್ರವಾಸದಲ್ಲಿರುವ ಅವರು ಎರಡನೇ ದಿನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ‘ಪಕ್ಷದಲ್ಲಿರುವ ನಾಯಕರು ಹಾಗೂ ಕಾರ್ಯಕರ್ತರನ್ನು ಎರಡು ಗುಂಪುಗಳಾಗಿ ಪ್ರತ್ಯೇಕ ಮಾಡಬೇಕಿದೆ. ಹೃದಯದೊಳಗೆ ಪಕ್ಷದ ಸಿದ್ದಾಂತ ಇಟ್ಟುಕೊಂಡವರು ಜನರ ಕಷ್ಟಗಳಿಗೆ ಧ್ವನಿಯಾಗಿ, ಜನರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ‌ಮತ್ತೊಂದು ಗುಂಪು ಜನರಿಂದಲೂ ದೂರವಿದ್ದು, ಬಿಜೆಪಿ ಜೊತೆಗಿದ್ದಾರೆ. ಇಂತಹವರನ್ನು ಪ್ರತ್ಯೇಕಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಕ್ಷದಿಂದಲೂ ತೆಗೆದುಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಇಂತಹ ಎರಡು ಗುಂಪುಗಳನ್ನು ಪ್ರತ್ಯೇಕಿಸುವ ತನಕ ಗುಜರಾತ್‌ನ ಜನರು ಪಕ್ಷವನ್ನು ನಂಬುವುದಿಲ್ಲ’ ಎಂದರು. 

‘ರಾಜ್ಯದ ವಜ್ರ, ಜವಳಿ ಹಾಗೂ ಸೆರಾಮಿಕ್‌ ಉದ್ಯಮಗಳು ಸಂಕಷ್ಟದಲ್ಲಿವೆ. ಗುಜರಾತ್‌ನ ಜನರು ಹೊಸ ದೃಷ್ಟಿಗಾಗಿ ಎದುರು ನೋಡುತ್ತಿದ್ದಾರೆ. ಕಳೆದ 20ರಿಂದ 25 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಈ ವಿಚಾರದಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ ಪಕ್ಷವು ಹೊಸ ದೃಷ್ಟಿ ನೀಡಲು ಸಿದ್ಧವಾಗಿದೆ’ ಎಂದು ಅವರು ತಿಳಿಸಿದರು.  

ರಾಹುಲ್‌ ಗಾಂಧಿ ಅವರು ಶುಕ್ರವಾರ ಪಕ್ಷದ ನಾಯಕರು ಹಾಗೂ ಬ್ಲಾಕ್‌ ಅಧ್ಯಕ್ಷರ ಜೊತೆಗೆ ಸಭೆ ನಡೆಸಿದ್ದರು. ಇದೇ ಏ. 8–9ರಂದು ಅಹಮದಾಬಾದ್‌ನಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಅಧಿವೇಶನ ನಡೆಯಲಿದೆ. 64 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಕಾಂಗ್ರೆಸ್‌ ಈ ಸಭೆಯನ್ನು ಆಯೋಜಿಸಿದೆ.

ರಾಜ್ಯದಲ್ಲಿ ಈಗ ಪಡೆದ ಮತಕ್ಕಿಂತ ಶೇ 5ರಷ್ಟು ಹೆಚ್ಚು ಮತಗಳನ್ನು ಪಡೆದು ಅಧಿಕಾರಕ್ಕೆ ಬರಬಹುದು. ತೆಲಂಗಾಣದಲ್ಲಿ ಶೇ 22ರಷ್ಟು ಹೆಚ್ಚು ಮತ ಪಡೆದು ಅಧಿಕಾರ ಪಡೆದಿದ್ದೇವೆ.
–ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.