ADVERTISEMENT

ನೀಟ್‌ ಎನ್ನುವುದೇ ’ನೈತಿಕ ಹಗರಣ’: ತಮಿಳುನಾಡು ಸಿಎಂ ಸ್ಟಾಲಿನ್‌ ಕಿಡಿ

ಪಿಟಿಐ
Published 23 ಜೂನ್ 2025, 16:01 IST
Last Updated 23 ಜೂನ್ 2025, 16:01 IST
ಎಂ.ಕೆ. ಸ್ಟಾಲಿನ್‌–ಪಿಟಿಐ ಚಿತ್ರ
ಎಂ.ಕೆ. ಸ್ಟಾಲಿನ್‌–ಪಿಟಿಐ ಚಿತ್ರ   

ಚೆನ್ನೈ: ‘ವೈದ್ಯಕೀಯ ಕೋರ್ಸ್‌ಗಳ ‍ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್) ವ್ಯವಸ್ಥೆಯು ನೈತಿಕ ಹಗರಣವಾಗಿದ್ದು, ಪ್ರತಿ ಹಂತವೂ ಅಕ್ರಮಗಳಿಂದ ತುಂಬಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ತಿಳಿಸಿದ್ದಾರೆ.

ನೀಟ್‌ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿಯೆತ್ತದ ವಿರೋಧ ಪಕ್ಷ ಎಐಎಡಿಎಂಕೆ ವಿರುದ್ಧ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.

‘ನೀಟ್‌ ಪರೀಕ್ಷೆಯು ಪ್ರತಿಭಾವಂತರಿಗೆ ಅಲ್ಲ ಎಂಬುದನ್ನು ಮತ್ತೊಂದು ಪ್ರಕರಣವು ಸಾಬೀತುಪಡಿಸಿದೆ. ಇದು ಕೇವಲ ಮಾರುಕಟ್ಟೆಯನ್ನಷ್ಟೇ ಆಧರಿಸಿದೆ. ಈ ಕಾರಣದಿಂದಲೇ, ನಾವು ಅತ್ಯಂತ ದೊಡ್ಡದಾಗಿ ಹಾಗೂ ಸ್ಪಷ್ಟವಾಗಿ ‘ನೀಟ್‌’ ಸರಿಯಿಲ್ಲ ಎಂಬುದನ್ನು ಹೇಳುತ್ತಿದ್ದೇವೆ’ ಎಂದು ‘ಎಕ್ಸ್‌’ನಲ್ಲಿ ಫೋಸ್ಟ್ ಮಾಡಿದ್ದಾರೆ.‌

ADVERTISEMENT

ನೀಟ್‌–2025ರ ಅಂಕ ತಿದ್ದುಪಡಿ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ಅಧಿಕಾರಿಗಳು ಹಾಗೂ ಮಹಾರಾಷ್ಟ್ರ ಮೂಲದ ವೈದ್ಯರ ವಿರುದ್ಧ ಸಿಬಿಐ ‍ಪ್ರಕರಣ ದಾಖಲಿಸಿದ್ದ ಸುದ್ದಿಯನ್ನು ಹಂಚಿಕೊಂಡು ಸ್ಟಾಲಿನ್‌ ಈ ಆರೋಪ ಮಾಡಿದ್ದಾರೆ.

‘ನೀಟ್‌ ಪ್ರವೇಶ ಪರೀಕ್ಷೆಯು ಗುಣಮಟ್ಟದ ವಿಶಿಷ್ಟ ಲಕ್ಷಣ ಹೊಂದಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ನೀಟ್‌ ಪರೀಕ್ಷೆಯು ಹಣದಿಂದಲೇ ಆರಂಭಗೊಂಡು, ಹಣದಿಂದಲೇ ಮುಕ್ತಾಯಗೊಳ್ಳುತ್ತದೆ. ಇಡೀ ಪರೀಕ್ಷೆಯು ನೈತಿಕ ಹಗರಣವಾಗಿದ್ದು, ಪ್ರಶ್ನೆಪತ್ರಿಕೆ ಸಿದ್ಧತೆ, ಪರೀಕ್ಷಾ ಕೇಂದ್ರ, ಫಲಿತಾಂಶ ಪ್ರಕಟಣೆಯವರೆಗೂ ಅಕ್ರಮಗಳಿಂದ ಕೂಡಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.