ADVERTISEMENT

ನೀಟ್‌, ಜೆಇಇ: ‘ಸುಪ್ರೀಂ’ ತೀರ್ಪು ಪುನರ್‌ಪರಿಶೀಲನೆಗೆ ಅರ್ಜಿ

ಪಿಟಿಐ
Published 28 ಆಗಸ್ಟ್ 2020, 12:01 IST
Last Updated 28 ಆಗಸ್ಟ್ 2020, 12:01 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಕೋವಿಡ್‌–19 ಪಿಡುಗಿನ ಸಂದರ್ಭದಲ್ಲೇ ನೀಟ್‌ ಹಾಗೂ ಜೆಇಇ ನಡೆಸಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿ ಆರು ರಾಜ್ಯಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.

ಪಶ್ಚಿಮ ಬಂಗಾಳ‌, ಜಾರ್ಖಂಡ್‌, ರಾಜಸ್ಥಾನ, ಚತ್ತೀಸ್‌ಗಢ‌, ಪಂಜಾಬ್‌ ಹಾಗೂ ಮಹಾರಾಷ್ಟ್ರ ಅರ್ಜಿ ಸಲ್ಲಿಸಿದ ರಾಜ್ಯಗಳಾಗಿವೆ. ‘ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿ ಮಾಡುವಲ್ಲಿ ಈ ತೀರ್ಪು ವಿಫಲವಾಗಿದೆ’ ಎಂದು ವಕೀಲರಾದ ಸುನಿಲ್‌ ಫೆರ್ನಾಂಡಿಸ್‌ ಅವರ ಮುಖಾಂತರ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

‘ಎನ್‌ಟಿಎ ನೀಡಿರುವ ಮಾಹಿತಿಯಂತೆ 9.53 ಲಕ್ಷ ವಿದ್ಯಾರ್ಥಿಗಳು ಜೆಇಇ ಮೇನ್ಸ್‌ ಎದುರಿಸಲಿದ್ದು, 660 ಪರೀಕ್ಷಾ ಕೇಂದ್ರಗಳಲ್ಲಿ ತಲಾ 1,443 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದೇ ರೀತಿ 15.97 ಲಕ್ಷ ವಿದ್ಯಾರ್ಥಿಗಳು ನೀಟ್‌ ಬರೆಯಲಿದ್ದು, 3,843 ಪರೀಕ್ಷಾ ಕೇಂದ್ರಗಳಿದ್ದರೂ, ಪ್ರತಿ ಕೇಂದ್ರದಲ್ಲಿ 415 ವಿದ್ಯಾರ್ಥಿಗಳು ಇರಲಿದ್ದಾರೆ. ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಹೊರಬಂದಲ್ಲಿ, ಅವರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಜೊತೆಗೆ ಕೋವಿಡ್‌ಗೆ ಪರಿಹಾರವಾಗಿ ಕಂಡುಕೊಂಡಿರುವ ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಸಾರ್ವಜನಿಕವಾಗಿ ಸೇರುವುದನ್ನು ತಡೆಯುವುದು ಮುಂತಾದ ನಿಯಮಗಳು ಇದ್ದೂ ಇಲ್ಲದಂತಾಗಲಿವೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ADVERTISEMENT

ಈ ಪರೀಕ್ಷೆಗಳನ್ನು ಮುಂದೂಡುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ನಿರ್ದೇಶನ ನೀಡಬೇಕು ಎಂದುಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ ಎಂದು ಆಗಸ್ಟ್‌ 17ರಂದು ತೀರ್ಪು ನೀಡಿತ್ತು.

ಪರೀಕ್ಷೆ ನಡೆಸುವುದರ ಪರ ನಿಂತ ಯೋಗಿ: ಉತ್ತರ ಪ್ರದೇಶ ಸರ್ಕಾರ ನೀಟ್‌ ಹಾಗೂ ಜೆಇಇ ನಡೆಸುವುದರ ಪರವಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಶುಕ್ರವಾರ ಹೇಳಿದರು. ಪರೀಕ್ಷೆಗಳನ್ನು ಮುಂದೂಡುವಂತೆ ವಿಪಕ್ಷಗಳಾದ ಸಮಾಜವಾದಿ ಪಕ್ಷ, ಕಾಂಗ್ರೆಸ್‌ ಬೇಡಿಕೆಯ ಬೆನ್ನಲ್ಲೇ ಉನ್ನತ ಮಟ್ಟದ ಸಭೆಯೊಂದರಲ್ಲಿ ಯೋಗಿ ಆದಿತ್ಯನಾಥ್‌ ಈ ಹೇಳಿಕೆ ನೀಡಿದ್ದಾರೆ.

ಆ.9ರಂದು ರಾಜ್ಯದಲ್ಲಿ 5 ಲಕ್ಷ ಅಭ್ಯರ್ಥಿಗಳು ಬಿ.ಇಡಿ ಪರೀಕ್ಷೆಯನ್ನು ಎದುರಿಸಿದ್ದರು. ಇದಾದ ನಂತರದಲ್ಲಿ ಕೋವಿಡ್‌–19ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಆಗಿಲ್ಲ. ಇದೇ ರೀತಿ ಇತರೆ ಕೆಲ ಪರೀಕ್ಷೆಗಳೂ ರಾಜ್ಯದಲ್ಲಿ ನಡೆದಿದೆ ಎಂದು ಆದಿತ್ಯನಾಥ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.