ADVERTISEMENT

ನೀಟ್‌ ಪಾಸ್‌ ಆಗುವಂತೆ ಒತ್ತಡ:  ತಂದೆ ಕೊಂದು, ದೇಹ ತುಂಡರಿಸಿದ ಪುತ್ರ

ಪಿಟಿಐ
Published 24 ಫೆಬ್ರುವರಿ 2026, 14:10 IST
Last Updated 24 ಫೆಬ್ರುವರಿ 2026, 14:10 IST
   

ಲಖನೌ: ನೀಟ್‌ ಪರೀಕ್ಷೆಯಲ್ಲಿ ಉತ್ತೀರ್ಣನಾಗುವಂತೆ ಒತ್ತಡ ಹೇರಿದ್ದಕ್ಕೆ 21 ವರ್ಷದ ಯುವಕನೊಬ್ಬ ತನ್ನ ತಂದೆಯನ್ನೇ ಕೊಂದು, ಮೃತದೇಹವನ್ನು ತುಂಡರಿಸಿದ ಭೀಕರ ಘಟನೆ ಉತ್ತರಪ್ರದೇಶದ ಆಶಿಯಾನಾ ಎಂಬಲ್ಲಿ ನಡೆದಿದೆ. 

ಮೃತ ವ್ಯಕ್ತಿಯನ್ನು ಮಾನವೇಂದ್ರ ಸಿಂಗ್‌ ಹಾಗೂ ಆರೋಪಿ ಯುವಕನನ್ನು ಪ್ರತಾಪ್‌ ಸಿಂಗ್‌ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಾಪ್‌ ಈ ಹಿಂದೆಯೂ ಎರಡು ಬಾರಿ ನೀಟ್‌ ಪರೀಕ್ಷೆ ಬರೆದಿದ್ದ. ಆದರೆ, ಉತ್ತೀರ್ಣನಾಗಿರಲಿಲ್ಲ. ಇದೇ ವಿಚಾರವಾಗಿ ಕಳೆದ ಶುಕ್ರವಾರ ತಂದೆ–ಮಗನ ನಡುವೆ ವಾಗ್ವಾದ ನಡೆಯಿತು. ಮಗನ ಮೇಲೆ ಕೋಪಗೊಂಡಿದ್ದ ಮಾನವೇಂದ್ರ, ಪ್ರತಾಪ್‌ನ ತಲೆಗೆ ಬಂದೂಕು ಇಟ್ಟು ಬೆದರಿಸಿದ್ದರು. ಈ ವೇಳೆ ತಂದೆಯ ಕೈಯಲ್ಲಿದ್ದ ಬಂದೂಕು ಕಸಿದ ಪ್ರತಾಪ್‌, ಅವರನ್ನೇ ಗುಂಡಿಟ್ಟು ಕೊಂದ ಎಂದು ಹೇಳಿದ್ದಾರೆ.

ADVERTISEMENT

‘ತನ್ನ ತಂದೆ ಕಾಣೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ಅಕ್ಕ‍ಪಕ್ಕದವರಿಗೆ ಹೇಳಿದ್ದ ಪ್ರತಾಪ್‌, ಬಳಿಕ ಪೊಲೀಸರು ಹಾಗೂ ನೆರೆಯವರ ಪ್ರಶ್ನೆಗಳಿಗೆ ಹೆದರಿ, ತನ್ನ ತಂದೆಯ ಸ್ನೇಹಿತರೊಬ್ಬರಿಗೆ ಕರೆ ಮಾಡಿದ. ತಾನೇ ಕೊಲೆ ಮಾಡಿರುವ ವಿಚಾರವನ್ನು ಅವರಲ್ಲಿ ಒಪ್ಪಿಕೊಂಡ’ ಎಂದು ಮಾಹಿತಿ ನೀಡಿದ್ದಾರೆ. 

ಸಹೋದರಿಯ ಕಣ್ಣೆದುರೇ ಕೃತ್ಯ: ಘಟನೆಯ ಸಂದರ್ಭದಲ್ಲಿ ಪ್ರತಾಪ್‌ನ ಕಿರಿಯ ಸಹೋದರಿಯು ಮನೆಯ ಬೇರೊಂದು ಕೊಠಡಿಯಲ್ಲಿದ್ದರು. ಗುಂಡಿನ ಸದ್ದು ಕೇಳಿ ಹೊರಬಂದ ಅವರನ್ನೂ ಕೊಲ್ಲುವುದಾಗಿ ಬೆದರಿಸಿದ ಪ್ರತಾಪ್‌, ಆಕೆಯನ್ನು 4 ದಿನಗಳ ಕಾಲ ಕೊಠಡಿಯಲ್ಲಿ ಕೂಡಿಹಾಕಿದ್ದ. ಈ ಅವಧಿಯಲ್ಲಿ ಮಾನವೇಂದ್ರ ಅವರ ದೇಹವನ್ನು ತುಂಡರಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ಬಿಸಾಡಿದ್ದಾನೆ. ಮೃತದೇಹದ ಮುಂಡದ ಭಾಗವನ್ನು ಡ್ರಮ್‌ ಒಂದರಲ್ಲಿ ಆ್ಯಸಿಡ್‌ ಮತ್ತು ಸಿಮೆಂಟ್‌ ಹಾಕಿ ಮುಚ್ಚಿಡಲು ಯೋಜಿಸಿ ಡ್ರಮ್‌ ಕೂಡ ತಂದಿದ್ದ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.