ADVERTISEMENT

ನೀಟ್–ಯುಜಿ: ಸರಿ ಉತ್ತರ ಗುರುತಿಸಲು ತಂಡ

ದೆಹಲಿ ಐಐಟಿ ನಿರ್ದೇಶಕರಿಗೆ ಸೂಚನೆ ನೀಡಿದ ಸುಪ್ರೀಂ ಕೋರ್ಟ್

ಪಿಟಿಐ
Published 22 ಜುಲೈ 2024, 15:44 IST
Last Updated 22 ಜುಲೈ 2024, 15:44 IST
   

ನವದೆಹಲಿ: ನೀಟ್‌–ಯುಜಿ 2024 ಪರೀಕ್ಷೆಯಲ್ಲಿ ಕೇಳಿದ್ದ ಒಂದು ಪ್ರಶ್ನೆಗೆ ಸರಿಯಾದ ಉತ್ತರ ಏನು ಎಂಬ ಬಗ್ಗೆ ವರದಿಯೊಂದನ್ನು ಸಲ್ಲಿಸಲು ಮೂವರು ತಜ್ಞರ ತಂಡವೊಂದನ್ನು ರಚಿಸುವಂತೆ ಐಐಟಿ–ದೆಹಲಿಯ ನಿರ್ದೇಶಕರಿಗೆ ಸುಪ್ರೀಂ ಕೋರ್ಟ್ ಸೋಮವಾರ ಸೂಚನೆ ನೀಡಿದೆ. ಸರಿ ಉತ್ತರ ಕುರಿತ ವರದಿಯನ್ನು ಮಂಗಳವಾರ ಮಧ್ಯಾಹ್ನದ ವೇಳೆಗೆ ಕೋರ್ಟ್‌ಗೆ ಸಲ್ಲಿಸಬೇಕಿದೆ.

ಪರಮಾಣುವಿಗೆ ಸಂಬಂಧಿಸಿದ ಒಂದು ಪ್ರಶ್ನೆಗೆ ಎರಡು ಸರಿ ಉತ್ತರಗಳು ಇವೆ. ಪರೀಕ್ಷೆಯನ್ನು ಬರೆದಿದ್ದ ವಿದ್ಯಾರ್ಥಿಗಳ ಪೈಕಿ ಒಂದು ಬಗೆಯ ಸರಿ ಉತ್ತರವನ್ನು ನೀಡಿದವರಿಗೆ ನಾಲ್ಕು ಅಂಕ ನೀಡಲಾಗಿದೆ ಎಂದು ಅರ್ಜಿದಾರರಲ್ಲಿ ಕೆಲವರು ಕೋರ್ಟ್‌ಗೆ ಮಾಹಿತಿ ನೀಡಿದರು.

ಈ ರೀತಿ ಮಾಡಿದ್ದು ಅಂತಿಮ ಮೆರಿಟ್ ಪಟ್ಟಿಯ ಮೇಲೆ ಗಣನೀಯ ಪರಿಣಾಮ ಉಂಟುಮಾಡುತ್ತದೆ ಎಂದು ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠಕ್ಕೆ ವಿವರಿಸಿದರು.

ADVERTISEMENT

ನೀಟ್–ಯುಜಿ ಪರೀಕ್ಷೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಪೀಠವು ಮಂಗಳವಾರ ಮತ್ತೆ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಈ ಪೀಠದಲ್ಲಿ ಇದ್ದಾರೆ.

ಪರೀಕ್ಷೆಯನ್ನು ನಡೆಸುವಲ್ಲಿ ವ್ಯವಸ್ಥೆಯು ವಿಫಲವಾಗಿದೆ ಎಂಬುದನ್ನು ತೋರಿಸುವಂತೆ ಪೀಠವು ಈ ಮೊದಲು ಅರ್ಜಿದಾರರಿಗೆ ಸೂಚಿಸಿತು. ಅಲ್ಲದೆ, ಪ್ರಶ್ನೆಪತ್ರಿಕೆ ಸೋರಿಕೆಯು ದೇಶದಾದ್ಯಂತ ವ್ಯಾಪಕವಾಗಿದೆ ಎಂಬುದನ್ನು ಸಾಬೀತುಮಾಡುವಂತೆಯೂ ಅದು ಸೂಚಿಸಿತು.

ಪ್ರಶ್ನೆಪತ್ರಿಕೆ ಸೋರಿಕೆಯು ವ್ಯಾಪಕವಾಗಿದೆ ಎಂಬುದನ್ನು ತೋರಿಸಲು ಅಧಿಕೃತವಾಗಿ ಯಾವುದೇ ಆಧಾರ ಇದುವರೆಗೆ ಇಲ್ಲ. ಪಟ್ನಾ ಮತ್ತು ಹಜಾರಿಬಾಗ್‌ನಲ್ಲಿ ಒಂದಿಷ್ಟು ಲೋಪಗಳು ಆಗಿವೆ. ಆದರೆ, ವ್ಯವಸ್ಥೆಯ ಲೋಪವನ್ನು ತೋರಿಸಲು ಅವಷ್ಟೇ ಸಾಕಾಗುವುದಿಲ್ಲ ಎಂದು ಪೀಠವು ಹೇಳಿತು.

‍ಪೀಠವು ವಿಚಾರಣೆಯ ವೇಳೆ, ಹರಿಯಾಣದ ಝಜ್ಜರ್‌ನಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಕೃಪಾಂಕ ಮತ್ತು ಹೆಚ್ಚುವರಿ ಸಮಯ ನೀಡಿದ್ದನ್ನು ಪ್ರಶ್ನಿಸಿತು. ಈ ವಿಚಾರವಾಗಿ ಟಿಪ್ಪಣಿಯೊಂದನ್ನು ಸಲ್ಲಿಸುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್‌ಟಿಎ) ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.