ADVERTISEMENT

ರಕ್ಷಣಾ ಸಮಿತಿಗೆ ಪ್ರಜ್ಞಾ ಠಾಕೂರ್‌ ನೇಮಕಕ್ಕೆ ಆಕ್ಷೇಪ

ರಕ್ಷಣಾ ಸಮಿತಿಯಲ್ಲಿ ಮಾಲೇಗಾಂವ್‌ ಆರೋಪಿಗೆ ಸ್ಥಾನ

ಪಿಟಿಐ
Published 21 ನವೆಂಬರ್ 2019, 20:26 IST
Last Updated 21 ನವೆಂಬರ್ 2019, 20:26 IST
ಪ್ರಜ್ಞಾ
ಪ್ರಜ್ಞಾ   

ನವದೆಹಲಿ: ಮಾಲೇಗಾಂವ್‌ ಸ್ಫೋಟ ಪ್ರಕರಣದ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್‌ ಅವರನ್ನು ಸಂಸತ್ತಿನ ರಕ್ಷಣಾ ಸಮಾಲೋಚನೆ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

‘ಭೀತಿ ಹರಡಿದ’ ಆರೋಪ ಹೊತ್ತಿರುವ ಸಂಸದೆಯನ್ನು ರಕ್ಷಣೆಗೆ ಸಂಬಂಧಿಸಿದ ಸಮಿತಿಗೆ ನೇಮಕ ಮಾಡಿರುವುದು ದುರದೃಷ್ಟಕರ ಎಂದು ಕಾಂಗ್ರೆಸ್‌ ಪಕ್ಷ ಹೇಳಿದೆ. ಪ್ರಜ್ಞಾ ಅವರ ಮೇಲೆ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ ಅಡಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ಅಡಿಯಲ್ಲಿ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಕೈಬಿಟ್ಟ ಬಳಿಕ, ಅನಾರೋಗ್ಯದ ಕಾರಣದಿಂದ ಅವರಿಗೆ ಬಾಂಬೆ ಹೈಕೋರ್ಟ್‌ 2017ರ ಏಪ್ರಿಲ್‌ನಲ್ಲಿ ಜಾಮೀನು ಮಂಜೂರು ಮಾಡಿದೆ.

ADVERTISEMENT

ಭೋಪಾಲ್‌ ಸಂಸದೆಯಾಗಿರುವ ಪ್ರಜ್ಞಾ ಅವರು ತಮ್ಮ ಹೇಳಿಕೆಗಳಿಂದಾಗಿಯೂ ವಿವಾದಕ್ಕೆ ಕಾರಣರಾಗಿದ್ದರು. ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ‘ದೇಶಭಕ್ತ’ ಎಂದು ಅವರು ಹೇಳಿದ್ದಕ್ಕೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಅವರು ಕ್ಷಮೆ ಯಾಚಿಸಿದ್ದರು. ಈ ಹೇಳಿಕೆಗಾಗಿ ಪ್ರಜ್ಞಾ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.