ADVERTISEMENT

ಪ್ರೇಮಿಗಳ ದಿನಕ್ಕೂ ಮುನ್ನ ಗುಲಾಬಿ ಆಮದು ನಿಷೇಧಿಸಿದ ನೇಪಾಳ.. ಇಲ್ಲಿದೆ ಕಾರಣ

nepal

ಪಿಟಿಐ
Published 10 ಫೆಬ್ರುವರಿ 2023, 13:54 IST
Last Updated 10 ಫೆಬ್ರುವರಿ 2023, 13:54 IST
ಗುಲಾಬಿ
ಗುಲಾಬಿ    

ಕಠ್ಮಂಡು: ಪ್ರೇಮಿಗಳ ದಿನದಂದು ಪ್ರೇಮ ನಿವೇದನೆಗೆ ಗುಲಾಬಿ ಹೂವುಗಳನ್ನು ಬಳಸುವ ವಾಡಿಕೆ ಇದೆ. ಆದರೆ, ಪ್ರೇಮಿಗಳ ದಿನಕ್ಕೆ ಇನ್ನು 3 ದಿನ ಬಾಕಿ ಇರುವಾಗಲೇ ಭಾರತ ಮತ್ತು ಚೀನಾದಿಂದ ಗುಲಾಬಿ ಹೂವುಗಳ ಆಮದನ್ನು ನೇಪಾಳ ನಿಷೇಧ ಹೇರಿದೆ.

ಗಿಡಗಳಿಗೆ ರೋಗ ಹಬ್ಬುವ ಆತಂಕದ ಹಿನ್ನೆಲೆಯಲ್ಲಿ ಗುಲಾಬಿ ಹೂವಿನ ಆಮದಿಗೆ ಅನುಮತಿ ನೀಡದಂತೆ ಗಡಿ ಕಚೇರಿಗಳಿಗೆ ನೇಪಾಳದ ಕೃಷಿ ಇಲಾಖೆಯ ಅಡಿಯಲ್ಲಿ ಬರುವ ಪ್ಲಾಂಟ್ ಕ್ವಾರಂಟೈನ್ ಮತ್ತು ಕೀಟನಾಶಕ ನಿರ್ವಹಣಾ ಕೇಂದ್ರವು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಿಶೇಷ ಕಾರಣ ನೀಡಿ ಗುಲಾಬಿ ಆಮದಿಗೆ ನಿಷೇಧ ಹೇರಿ ಭಾರತ, ಚೀನಾ ಗಡಿಯ 15 ಕಸ್ಟಮ್ಸ್ ಕಚೇರಿಗಳಿಗೆ ಲಿಖಿತ ನಿರ್ದೇಶನ ನೀಡಲಾಗಿದೆ.

ADVERTISEMENT

‘ಎಲ್ಲ ಗಡಿ ಕಚೇರಿಗಳು ಯಾವುದೇ ವಿಶೇಷ ಅನುಮತಿ ಇಲ್ಲದ ಹೊರತಾಗಿ ಗುಲಾಬಿ ಆಮದಿಗೆ ಅವಕಾಶ ನೀಡಬಾರದು’ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ತರಕಾರಿ ಉತ್ಪನ್ನಗಳಿಗೆ ರೋಗ ಮತ್ತು ಕೀಟಗಳ ಹರಡುವಿಕೆ ಸಾಧ್ಯತೆಯ ಹಿನ್ನೆಲೆಯಲ್ಲಿ ಗುಲಾಬಿ ಆಮದನ್ನು ಕೂಡಲೇ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಮಾಹಿತಿ ಅಧಿಕಾರಿ ಮಹೇಶ್ ಚಂದ್ರ ಆಚಾರ್ಯ ಹೇಳಿದ್ದಾರೆ.

‘ಗುಲಾಬಿ ಮತ್ತು ಇತರ ಸಸ್ಯಗಳಲ್ಲಿ ರೋಗದ ಆತಂಕ ಇರುವುದರಿಂದ ಸದ್ಯ ಆಮದು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸೂಕ್ತ ಅಧ್ಯಯನ ನಡೆಯಬೇಕಿದೆ. ಈ ಕುರಿತಂತೆ ತಾಂತ್ರಿಕ ಸಮಿತಿಯ ಸಭೆ ಬಾಕಿ ಇದೆ. ಸಭೆ ಬಳಿಕವೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ’ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.