ADVERTISEMENT

ಗಂಗಾ ನದಿಯಲ್ಲಿ ತೇಲಿಬಂದ ಮರದ ಪೆಟ್ಟಿಗೆಯೊಳಗಿತ್ತು ನವಜಾತ ಹೆಣ್ಣುಶಿಶು

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 8:24 IST
Last Updated 16 ಜೂನ್ 2021, 8:24 IST
ಗಂಗಾ ನದಿ
ಗಂಗಾ ನದಿ   

ಘಾಜಿಪುರ: ಭೂಮಿಯನ್ನು ಉಳುವಾಗ ಜನಕ ರಾಜನಿಗೆ ಸೀತೆ ಸಿಕ್ಕಿದ ಬಗ್ಗೆ ರಾಮಾಯಣದಲ್ಲಿ ಓದಿರುತ್ತೀರಿ. ಮಹಾಭಾರತದಲ್ಲಿ ಕುಂತಿ ಮದುವೆಗೂ ಮೊದಲು ಕರ್ಣನನ್ನು ಹಡೆದು ಗಂಗಾನದಿಯಲ್ಲಿ ತೇಲಿಬಿಟ್ಟಿದ್ದನ್ನು ಕೇಳಿರುತ್ತೀರಿ. ಆದರೆ ಪುರಾಣ ನೆನಪಿಸುವ ಇಂತಹದ್ದೇ ರೀತಿಯ ಘಟನೆ ಇಂದು ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.

ಉತ್ತರ ಪ್ರದೇಶದಲ್ಲಿ ಘಾಜಿಪುರ ಜಿಲ್ಲೆಯಲ್ಲಿ ಗಂಗಾ ನದಿಯಲ್ಲಿ ಹೆಣ್ಣು ಮಗುವೊಂದು ತೇಲಿಬಂದು ನಾವಿಕನ ಕೈಗೆ ಸಿಕ್ಕಿದ ವಿಸ್ಮಯ ಘಟನೆಯೊಂದು ವರದಿಯಾಗಿದೆ.

ಘಾಜಿಪುರ ಜಿಲ್ಲೆಯಲ್ಲಿ ದೋಣಿ ನಡೆಸುತ್ತಿದ್ದ ನಾವಿಕ ಗಂಗಾ ನದಿ ದಡದ ಸಮೀಪ ತೇಲಿಬಂದ ಮರದ ಪೆಟ್ಟಿಗೆಯನ್ನು ಗಮನಿಸಿದ್ದಾನೆ. ಅಳುತ್ತಿರುವ ಮಗುವಿನ ಧ್ವನಿಯೂ ಕೇಳಿಬಂದಾಗ ಕುತೂಹಲದಿಂದ ಮರದ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅಚ್ಚರಿಗೆ ಒಳಗಾಗಿದ್ದಾನೆ.

ADVERTISEMENT

ಪೆಟ್ಟಿಗೆಯೊಳಗೆ ನವಜಾತ ಹೆಣ್ಣು ಮಗುವನ್ನು ಗಮನಿಸಿ ದೇವರ ಪವಾಡವೆಂದೇ ಗ್ರಹಿಸಿದ್ದಾನೆ. ವಿಚಾರ ತಿಳಿದ ಸುತ್ತಮುತ್ತಲಿನವರು ಆಗಮಿಸಿ ವಿಸ್ಮಯ ಘಟನೆಯನ್ನು ಕಣ್ತುಂಬಿಕೊಂಡಿದ್ದಾರೆ. ಮಗುವಿನ ಅಕ್ಕಪಕ್ಕ ದೇವರ ಫೋಟೊಗಳು, ಜನ್ಮಕುಂಡಲಿ ಮತ್ತು ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ.

ಪೆಟ್ಟಿಗೆಯೊಳಗೆ ಇಡಲಾಗಿರುವ ದೇವರ ಫೋಟೊಗಳು ಮತ್ತು ಸುರಕ್ಷಿತ ವ್ಯವಸ್ಥೆಯನ್ನು ಗಮನಿಸಿದಾಗ ಕೌಟುಂಬಿಕ ಸಂಕಷ್ಟದಿಂದ ಹೆಣ್ಣುಮಗುವನ್ನು ಸಾಕಲು ಸಾಧ್ಯವಾಗದೆ ದೇವರೇ ಸಾಕಿಕೊಳ್ಳುತ್ತಾನೆ ಎಂಬ ಆಶಾವಾದದಲ್ಲಿ ಪೆಟ್ಟಿಗೆಯೊಳಗಿಟ್ಟು ತೆಲಿಬಿಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಆರೋಗ್ಯದಿಂದಿರುವ ಮಗುವನ್ನು ಪೊಲೀಸರು ಆಶಾ ಜ್ಯೋತಿ ಕೇಂದ್ರಕ್ಕೆ ನೀಡಿದ್ದಾರೆ ಎಂದು 'ಎಬಿಪಿಲೈವ್‌' ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.