ADVERTISEMENT

ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳಕ್ಕೆ ರೂಪಾಂತರ ವೈರಸ್ ಕಾರಣವೇ?

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 3:38 IST
Last Updated 24 ಫೆಬ್ರುವರಿ 2021, 3:38 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ನವದೆಹಲಿ: ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೋವಿಡ್–19 ಸೋಂಕು ಹೆಚ್ಚಾಗುತ್ತಿರುವುದಕ್ಕೂ ದೇಶದಲ್ಲಿ ಕೊರೊನಾ ವೈರಸ್‌ನ ರೂಪಾಂತರ ಪತ್ತೆಯಾಗಿರುವುದಕ್ಕೂ ಸಂಬಂಧವಿಲ್ಲ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಕಳೆದ ಆರು ದಿನಗಳಲ್ಲಿ ದೇಶದಲ್ಲಿ ಸೋಂಕು ಪ್ರಕರಣಗಳಲ್ಲಿ ಹಠಾತ್ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಧಾನಿ ಕಾರ್ಯಾಲಯ ಪರಿಶೀಲನೆ ನಡೆಸಿದೆ.

ಮಹಾರಾಷ್ಟ್ರ, ಕೇರಳ ಹಾಗೂ ತೆಲಂಗಾಣದಲ್ಲಿ ವೈರಸ್‌ನ ಸಣ್ಣಮಟ್ಟಿನ ರೂಪಾಂತರ (‘ಎನ್‌440ಕೆ’ ಹಾಗೂ ‘ಇ484ಕೆ’ ರೀತಿಯದ್ದು) ಕಂಡುಬಂದಿರುವುದನ್ನು ವಿಜ್ಞಾನಿಗಳು ದಾಖಲಿಸಿದ್ದಾರೆ ಎಂದು ನೀತಿ ಆಯೋಗದ ಸದಸ್ಯ ವಿನೋದ್ ಪೌಲ್ ತಿಳಿಸಿದ್ದಾರೆ. ಬ್ರಿಟನ್‌, ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್‌ನಲ್ಲಿ ರೂಪಾಂತರಗೊಂಡ ತಳಿಗಳ ಸೋಂಕು ಪ್ರಕರಣಗಳೂ ದೇಶದಲ್ಲಿ ಈಗಾಗಲೇ ವರದಿಯಾಗಿವೆ.

2020ರ ಮಾರ್ಚ್‌ ಹಾಗೂ ಜುಲೈ ಅವಧಿಯಲ್ಲೇ ಮಹಾರಾಷ್ಟ್ರದಲ್ಲಿ ‘ಇ484ಕೆ’ ರೂಪಾಂತರ ಪತ್ತೆಯಾಗಿತ್ತು. 2020ರ ಮೇ–ಸೆಪ್ಟೆಂಬರ್‌ ಅವಧಿಯಲ್ಲಿ ‘ಎನ್‌440ಕೆ’ ರೂಪಾಂತರವು ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಅಸ್ಸಾಂನಲ್ಲಿ ಕಂಡುಬಂದಿತ್ತು.

‘ಆದರೆ ಮಹಾರಾಷ್ಟ್ರ ಮತ್ತು ಕೇರಳದ ಕೆಲವು ಜಿಲ್ಲೆಗಳಲ್ಲಿ ಏಕಾಏಕಿ ಕೋವಿಡ್ ಸೋಂಕು ಉಲ್ಬಣಗೊಳ್ಳಲು ರೂಪಾಂತರ ವೈರಸ್ ಕಾರಣ ಎನ್ನಲು ಬಲವಾದ ವೈಜ್ಞಾನಿಕ ಆಧಾರಗಳಿಲ್ಲ’ ಎಂದು ಪೌಲ್ ಹೇಳಿದ್ದಾರೆ. ಇವರು ಏಮ್ಸ್‌ನ ನಿವೃತ್ತ ಪ್ರಾಧ್ಯಾಪಕರೂ ಆಗಿದ್ದಾರೆ.

ಮಹಾರಾಷ್ಟ್ರದಲ್ಲಿ ಸೋಂಕು ಪ್ರಕರಣಗಳು ಹಠಾತ್ತಾಗಿ ಏರಿಕೆಯಾಗಲು ರೂಪಾಂತರ ವೈರಸ್ ಕಾರಣ ಎಂದು ಅಲ್ಲಿನ ಸರ್ಕಾರಿ ಅಧಿಕಾರಿಯೊಬ್ಬರು ಇತ್ತೀಚೆಗೆ ಹೇಳಿದ್ದರು.

‘ಮಹಾರಾಷ್ಟ್ರದಲ್ಲಿ ಸೋಂಕು ಪ್ರಕರಣಗಳ ಏರಿಕೆಗೆ ರೂಪಾಂತರ ವೈರಸ್ ಕಾರಣ ಎನ್ನಲಾಗದು. ಆದಾಗ್ಯೂ, ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಲಾಗಿದೆ. ಹೆಚ್ಚಿನ ವೈಜ್ಞಾನಿಕ ಪುರಾವೆಗಳು ದೊರೆತ ಕೂಡಲೇ ಮಾಹಿತಿ ಹಂಚಿಕೊಳ್ಳಲಾಗುವುದು’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ ಹೇಳಿದ್ದಾರೆ.

ಈ ಮಧ್ಯೆ, ಸೋಂಕು ಹೆಚ್ಚಳದ ಹಿಂದಿನ ಕಾರಣ ತಿಳಿಯುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಮಹಾರಾಷ್ಟ್ರ, ಕೇರಳ, ಪಂಜಾಬ್, ಛತ್ತೀಸಗಡ, ಮಧ್ಯ ಪ್ರದೇಶ ಹಾಗೂ ಜಮ್ಮು–ಕಾಶ್ಮೀರಗಳಿಗೆ ತಂಡಗಳನ್ನು ಕಳುಹಿಸಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.