ADVERTISEMENT

ಲಸಿಕೆಗೆ ನಿಲುಕದ ಕೋವಿಡ್‌ ಹೊಸ ತಳಿ ಆಫ್ರಿಕಾದಲ್ಲಿ ಪತ್ತೆ

ತಳಿ ರೂಪಾಂತರ, ಹರಡುವಿಕೆಯ ವೇಗ ಎರಡೂ ಹೆಚ್ಚು

ಪಿಟಿಐ
Published 31 ಆಗಸ್ಟ್ 2021, 2:13 IST
Last Updated 31 ಆಗಸ್ಟ್ 2021, 2:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿಯೊಂದು ದಕ್ಷಿಣ ಆಫ್ರಿಕಾ ಮತ್ತು ಹಲವು ದೇಶಗಳಲ್ಲಿ ಪತ್ತೆಯಾಗಿದೆ. ಈ ತಳಿಯು ಇತರ ತಳಿಗಳಿಗಿಂತ ಹೆಚ್ಚು ವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ. ಜತೆಗೆ, ಈಗ ಇರುವ ಯಾವುದೇ ಲಸಿಕೆಯು ಈ ತಳಿಯ ವಿರುದ್ಧ ರಕ್ಷಣೆ ನೀಡದು ಎಂಬುದು ಕಳವಳಕಾರಿ ಎಂದು ದಕ್ಷಿಣ ಆಫ್ರಿಕಾದ ಅಧ್ಯಯನವೊಂದು ಹೇಳಿದೆ.

ಸಿ.1.2 ಎಂಬ ಹೆಸರಿನ ಈ ತಳಿಯು ಮೇ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆ (ಎನ್‌ಐಸಿಡಿ) ಮತ್ತು ಕುಝುಲು ನ್ಯಾಟಲ್‌ ರೀಸರ್ಚ್‌ ಇನ್ನೊವೇಶನ್ ಅಂಡ್‌ ಸೀಕ್ವೆನ್ಸ್‌ ಪ್ಲಾಟ್‌ಫಾರ್ಮ್‌ (ಕೆಆರ್‌ಐಎಸ್‌ಪಿ) ಹೇಳಿದೆ.

ಚೀನಾ, ಡೆಮಾಕ್ರಟಿಕ್ ರಿಪಬ್ಲಿಕ್‌ ಆಫ್‌ ಕಾಂಗೊ, ಮಾರಿಷಸ್‌, ಇಂಗ್ಲೆಂಡ್, ನ್ಯೂಜಿಲೆಂಡ್, ಪೋರ್ಚುಗಲ್‌ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸಿ.1.2 ತಳಿ ಕಂಡುಬಂದಿದೆ ಎಂದು ಅಧ್ಯಯನ ವರದಿ ಹೇಳಿದೆ.ಸಿ.1.2 ಅತಿ ಹೆಚ್ಚು ಬಾರಿ ರೂಪಾಂತರಗೊಂಡ ತಳಿಯಾಗಿದೆ.

ADVERTISEMENT

ಈ ತಳಿಯ ರೂಪಾಂತರದ ವೇಗವೂ ಹೆಚ್ಚಾಗಿದ್ದು, ಒಂದು ವರ್ಷದಲ್ಲಿ 41ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿದೆ. ಇತರ ತಳಿಗಳ ರೂಪಾಂತರಕ್ಕೆ ಹೋಲಿಸಿದರೆ ಇದು ದುಪ್ಪಟ್ಟು. ವೈರಾಣುವಿನ ಸಂರಚನೆಯಲ್ಲಿ ಆಗುವ ಬದಲಾವಣೆಯಿಂದಾಗಿ ದೇಹದಲ್ಲಿ ರೂಪುಗೊಂಡಿರುವ ಪ್ರತಿಕಾಯಗಳ ರಕ್ಷಣೆಯು ವ್ಯಕ್ತಿಗೆ ದೊರೆಯುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಯುರೋಪ್‌: ಸಾವಿನ ಸಂಖ್ಯೆ ಹೆಚ್ಚಳ ಭೀತಿ

ಕೋಪನ್‌ಹೇಗನ್‌: ‘ಕೋವಿಡ್ ಪ್ರಕರಣಗಳ ಹೆಚ್ಚಳ ಹಾಗೂ ಲಸಿಕೆ ಅಭಿಯಾನದ ನಿಧಾನಗತಿಯಿಂದಾಗಿ ಯೂರೋಪ್‌ನಲ್ಲಿ ಡಿ. 1ರ ವೇಳೆಗೆ ಸುಮಾರು 2.36 ಲಕ್ಷ ಮಂದಿ ಸಾವಿಗೀಡಾಗುವ ಸಾಧ್ಯತೆ ಇದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಸೋಮವಾರ ಎಚ್ಚರಿಕೆ ನೀಡಿದೆ.

‘ಡೆಲ್ಟಾ ರೂಪಾಂತರ ವೈರಾಣು ಸೋಂಕು ಪ್ರಕರಣಗಳು ಹೆಚ್ಚಾಗಿದ್ದು, ಯುರೋಪಿನ ಅನೇಕ ಪ್ರದೇಶಗಳಲ್ಲಿ ಲಸಿಕೆ ಅಭಿಯಾನವು ವಿಳಂಬವಾಗುತ್ತಿದೆ. ಕಳೆದ ವಾರವೊಂದರಲ್ಲೇ ಯುರೋಪಿನಲ್ಲಿ ಕೋವಿಡ್ ಸಾವಿನ ಸಂಖ್ಯೆಯಲ್ಲಿ ಶೇ 11ರಷ್ಟು ಏರಿಕೆಯಾಗಿದೆ’ ಎಂದು ಡಬ್ಲ್ಯುಎಚ್‌ಒ ನಿರ್ದೇಶಕ (ಯುರೋಪ್‌) ಹ್ಯಾನ್ಸ್ ಕ್ಲುಗೆ ಅಭಿಪ್ರಾಯಪಟ್ಟಿದ್ದಾರೆ.

‘ಬಡರಾಷ್ಟ್ರಗಳಲ್ಲಿ, ವಿಶೇಷವಾಗಿ ಮಧ್ಯ ಏಷ್ಯಾದ ರಾಷ್ಟ್ರಗಳಲ್ಲಿ ಸೋಂಕಿನ ಪ್ರಮಾಣದ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚಿದೆ. ಯುರೋಪಿನಾದ್ಯಂತ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಯುರೋಪ್‌ನ 53 ಸದಸ್ಯ ರಾಷ್ಟ್ರಗಳ ಪೈಕಿ 33 ರಾಷ್ಟ್ರಗಳಲ್ಲಿ ಎರಡು ವಾರದ ಅವಧಿಯಲ್ಲಿ ಕೋವಿಡ್ ಪ್ರಕರಣಗಳು ಶೇ 10ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿವೆ’ ಎಂದೂ ಅವರು ಮಾಹಿತಿ ನೀಡಿದರು.

‘ಯುರೋಪಿನ ಅರ್ಧದಷ್ಟು ಭಾಗದ ಜನರು ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ಧಾರೆ. ಆದರೂ ಈ ಪ್ರದೇಶಗಳಲ್ಲಿ ಲಸಿಕಾ ಕಾರ್ಯ ನಿಧಾನವಾಗಿದೆ. ಕಳೆದ 6 ವಾರಗಳಲ್ಲಿ ಕೆಲ ದೇಶಗಳಲ್ಲಿ ಲಸಿಕೆಯ ಕೊರತೆಯೂ ಎದುರಾಗಿದೆ. ಹಾಗಾಗಿ, ಲಸಿಕೆಯ ತಯಾರಿ ಪ್ರಮಾಣ ಹೆಚ್ಚಿಸಬೇಕು’ ಎಂದು ಕ್ಲುಗೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.