ADVERTISEMENT

ದೆಹಲಿ ಅಗ್ನಿ ದುರಂತ: ಇನ್ನೂ ಪತ್ತೆಯಾಗದ 24 ಮಹಿಳೆಯರು

ಐಎಎನ್ಎಸ್
Published 14 ಮೇ 2022, 6:10 IST
Last Updated 14 ಮೇ 2022, 6:10 IST
ದೆಹಲಿ ಅಗ್ನಿ ದುರಂತ
ದೆಹಲಿ ಅಗ್ನಿ ದುರಂತ   

ನವದೆಹಲಿ: ನವದೆಹಲಿಯ ಮುಂಡ್ಕಾ ಎಂಬಲ್ಲಿನ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಈಗಾಗಲೇ 27 ಮಂದಿ ಮೃತಪಟ್ಟಿದ್ದಾರೆ. ಆದರೆ, ಕಟ್ಟಡದಲ್ಲಿದ್ದ 24 ಮಹಿಳೆಯರು ಸೇರಿದಂತೆ 25 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರದ ಘಟನೆಯಲ್ಲಿ ಸಾವಿಗೀಡಾದವರ ಮೃತದೇಹಗಳನ್ನು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಹೀಗಾಗಿ, ನಾಪತ್ತೆಯಾದವರ ಸಂಬಂಧಿಕರು ತಮ್ಮ ಪ್ರೀತಿಪಾತ್ರರನ್ನು ಹುಡುಕಿಕೊಂಡು ಆಸ್ಪತ್ರೆಗೆ ಬರುತ್ತಲೇ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಯ ಪ್ರಕಾರ, ಗಾಯಗೊಂಡ ಒಬ್ಬ ವ್ಯಕ್ತಿ ಮಾತ್ರ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ADVERTISEMENT

ಉಳಿದ 13 ಮಂದಿ ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆದು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 14 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಬೆಂಕಿ ಹೊತ್ತಿಕೊಂಡಾಗ ಕಟ್ಟಡದಲ್ಲಿದ್ದ ನನ್ನ ಪತ್ನಿ ಸೋನಿಯಾಳನ್ನು ಪತ್ತೆಹಚ್ಚಲು ನಾನು ಪ್ರಯತ್ನಿಸುತ್ತಿದ್ದೇನೆ’ ಎಂದು ಬಿಹಾರ ಮೂಲದ ಮನೋಜ್ ಠಾಕೂರ್ ಅವರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

‘ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಸೋನಿ ನನಗೆ ಕರೆ ಮಾಡಿದ್ದಳು. ಆದರೆ ನಂತರ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ’ ಎಂದು ಅವರು ಆತಂಕದಲ್ಲೇ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.