ADVERTISEMENT

ಗೆಳತಿಯನ್ನು ಕೊಂದು ಶವವನ್ನು ಫ್ರಿಡ್ಜ್‌ನಲ್ಲಿಟ್ಟು ಬೇರೊಂದು ಮದುವೆ: ಆರೋಪಿ ಬಂಧನ

ಪಿಟಿಐ
Published 15 ಫೆಬ್ರುವರಿ 2023, 3:54 IST
Last Updated 15 ಫೆಬ್ರುವರಿ 2023, 3:54 IST
   

ನವದೆಹಲಿ: 24 ವರ್ಷದ ವ್ಯಕ್ತಿಯೊಬ್ಬ ಗೆಳತಿಯನ್ನು ಕೊಂದು, ಆಕೆಯ ದೇಹವನ್ನು ತನ್ನ ಢಾಬಾದ ರೆಫ್ರಿಜರೇಟರ್‌ನಲ್ಲಿ ತುಂಬಿ ಅದೇ ದಿನ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಹೊಗಿದ್ದ ಘಟನೆ ನೈಋತ್ಯ ದೆಹಲಿಯಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಪ್ರಕರಣ ಸಂಬಂಧ, ನೈಋತ್ಯ ದೆಹಲಿಯ ಮಿತ್ರಾನ್ ಗ್ರಾಮದ ನಿವಾಸಿ, ಆರೋಪಿ ಸಾಹಿಲ್ ಗೆಹಲೋತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರೇಮಿಗಳ ದಿನದಂದು ಘಟನೆ ಬೆಳಕಿಗೆ ಬಂದಿದ್ದು, ಕೊಲೆಯಾದ ನಾಲ್ಕು ದಿನಗಳ ನಂತರ 23 ವರ್ಷದ ಮಹಿಳೆ ನಿಕ್ಕಿ ಯಾದವ್‌ ಶವವನ್ನು ಮಂಗಳವಾರ ಬೆಳಿಗ್ಗೆ ರೆಸ್ಟೋರೆಂಟ್‌ನಲ್ಲಿನ ರೆಫ್ರಿಜರೇಟರ್‌ನಿಂದ ಹೊರತೆಗೆಯಲಾಗಿದೆ.

ADVERTISEMENT

ಬೇರೊಬ್ಬ ಮಹಿಳೆಯೊಂದಿಗೆ ಮದುವೆ ನಿಶ್ಚಯವಾಗಿದ್ದ ಸಂಗತಿಯನ್ನು ಆರೋ‍ಪಿಯು ಗೆಳತಿ ನಿಕ್ಕಿ ಯಾದವ್‌ ಅವರಿಂದ ಮರೆಮಾಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯ ಬಗ್ಗೆ ತಿಳಿದಾಗ ನಿಕ್ಕಿ ಜಗಳ ಮಾಡಿದ್ದಾಳೆ. ಈ ಸಂದರ್ಭ ಸಾಹಿಲ್, ಮೊಬೈಲ್ ಡೇಟಾ ಕೇಬಲ್ ಅನ್ನು ಕುತ್ತಿಗೆಗೆ ಬಿಗಿದು ಕೊಂದಿದ್ದಾನೆ ಎಂದು ತಿಳಿದುಬಂದಿದೆ.

ನೀನು ಮತ್ತೊಬ್ಬ ಮಹಿಳೆಯನ್ನು ಮದುವೆಯಾದರೆ ಪ್ರಕರಣ ದಾಖಲಿಸುವುದಾಗಿ ನಿಕ್ಕಿ, ಸಾಹಿಲ್‌ಗೆ ಎಚ್ಚರಿಕೆ ನೀಡಿದ್ದಳು ಎಂದು ಮೂಲಗಳು ತಿಳಿಸಿವೆ.

ನಿಕ್ಕಿ ಮತ್ತು ಸಾಹಿಲ್ ಕಳೆದ ಎರಡು ವರ್ಷಗಳಿಂದ ಸಹಜೀವನದಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಫೆಬ್ರುವರಿ 9ರ ರಾತ್ರಿ ಈ ಘಟನೆ ನಡೆದಿದ್ದು, ಹತ್ಯೆಗೀಡಾದ ನಿಕ್ಕಿ ಸಾಹಿಲ್ ಜೊತೆ ಮದುವೆ ವಿಚಾರವಾಗಿ ಜಗಳ ತೆಗೆದಿದ್ದಾಳೆ. ಈ ಸಂದರ್ಭ ಸಾಹಿಲ್ ಮೊಬೈಲ್‌ನ ಡೇಟಾ ಕೇಬಲ್ ಬಳಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

‘ಫೆಬ್ರುವರಿ 9ರಂದು ಗೆಳೆಯನಿಗೆ ಕರೆ ಮಾಡಿ ದೆಹಲಿಯ ಉತ್ತಮ್ ನಗರಕ್ಕೆ ಬರಲು ನಿಕ್ಕಿ ಹೇಳಿದ್ದಳು. ಕಾರಿನಲ್ಲಿ ನಿಕ್ಕಿಯನ್ನು ಕೂರಿಸಿಕೊಂಡು ಸಾಹಿಲ್ ಹೊರಟಿದ್ದಾನೆ. ಈ ಸಂದರ್ಭ ಬೇರೆ ಮದುವೆ ಆಗದಂತೆ ನಿಕ್ಕಿ ಒತ್ತಡ ಹಾಕಿದ್ದಾಳೆ. ಅಲ್ಲದೆ, ಗೋವಾಗೆ ತೆರಳಲು ವಿಮಾನದ ಟಿಕೆಟ್ ಸಹ ಬುಕ್ ಮಾಡಿದ್ದಳು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಕಾರಿನಲ್ಲೇ ಕೊಲೆ ನಡೆದಿದೆ’ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.