ADVERTISEMENT

ಮಹಾರಾಷ್ಟ್ರದಲ್ಲಿ ಹೊಸ ‘ಮಹಾ ಯುತಿ’ ಸರ್ಕಾರ ಬರಬಹುದು! ಕೇಂದ್ರ ಸಚಿವ

ಪಿಟಿಐ
Published 12 ಜೂನ್ 2021, 2:43 IST
Last Updated 12 ಜೂನ್ 2021, 2:43 IST
ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಜೊತೆಗೆ ಕೇಂದ್ರ ಸಚಿವ ರಾಮದಾಸ್‌ ಅಟವಳೆ ( ಪಿಟಿಐ ಚಿತ್ರ )
ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಜೊತೆಗೆ ಕೇಂದ್ರ ಸಚಿವ ರಾಮದಾಸ್‌ ಅಟವಳೆ ( ಪಿಟಿಐ ಚಿತ್ರ )   

ನಾಗಪುರ (ಮಹಾರಾಷ್ಟ್ರ): ಶಿವಸೇನೆ ಮತ್ತು ಬಿಜೆಪಿ ನಡುವೆ ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಸೂತ್ರದ ಆಧಾರದ ಮೇಲೆ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮತ್ತು ಇತರರ ಪಕ್ಷಗಳ ‘ಮಹಾ ಯುತಿ‘ ಸರ್ಕಾರ ರಚನೆಯಾಗಬಹುದು ಎಂದು ಕೇಂದ್ರ ಸಚಿವ ರಾಮದಾಸ್‌ ಅಟವಳೆ ಹೇಳಿದ್ದಾರೆ.

‘ನಾನು ಈ ವಿಷಯವನ್ನು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರೊಂದಿಗೆ ಚರ್ಚಿಸಿದ್ದೇನೆ ಮತ್ತು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಭೆಯಲ್ಲಿಯೂ ಇದನ್ನು ಚರ್ಚಿಸುತ್ತೇನೆ,’ ಎಂದು ಕೇಂದ್ರದ ‘ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ’ ಖಾತೆ ರಾಜ್ಯ ಸಚಿವ, ಎನ್‌ಡಿಎ ಮಿತ್ರಪಕ್ಷ ‘ಭಾರತೀಯ ರಿಪಬ್ಲಿಕನ್‌ ಪಕ್ಷ‘ದ ನಾಯಕ ಅಟವಳೆ ಹೇಳಿದರು.

ಮಹಾರಾಷ್ಟ್ರಕ್ಕೆ ಸಿಗಬೇಕಾದ ‘ತೌತೆ’ ಚಂಡಮಾರುತದ ಪರಿಹಾರಗಳ ವಿಚಾರವಾಗಿಯೂ ಪ್ರಧಾನಿಯೊಂದಿಗೆ ತಾವು ಚರ್ಚಿಸುವುದಾಗಿ ಅಟವಳೆ ತಿಳಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಭೆ ಮತ್ತು ಶಿವಸೇನಾ ವಕ್ತಾರ ಸಂಜಯ್ ರಾವುತ್‌ ಅವರು ಪ್ರಧಾನ ಮಂತ್ರಿಯವರನ್ನು ಹೊಗಳಿರುವುದನ್ನು ಉಲ್ಲೇಖಿಸಿ ಅಟವಳೆ ‘ಮಹಾ ಯುತಿ’ ರಚನೆಯ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಸೇನಾ-ಬಿಜೆಪಿ ಮೈತ್ರಿಯನ್ನು ಪುನರುಜ್ಜೀವನಗೊಳಿಸಲು ಇದು ಸರಿಯಾದ ಸಮಯ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಮುನಿಸಿಕೊಂಡ ಬಿಜೆಪಿ ಮತ್ತು ಶಿವಸೇನೆ ಅಂತಿಮವಾಗಿ ಮೈತ್ರಿ ಕಡಿದುಕೊಂಡಿದ್ದವು. ನಂತರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಮಹಾಘಟಬಂಧನ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಶಿವಸೇನೆಯ ಉದ್ಧವಠಾಕ್ರೆ ಮುಖ್ಯಮಂತ್ರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.