ADVERTISEMENT

ಹೊಸ ಕಾನೂನು ಪ್ರಾದೇಶಿಕ ಭಾಷೆಯಲ್ಲಿ ಇರಲಿ: ಮೋದಿ

ಕಾನೂನು ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆ ಬಳಕೆಗೆ ಒತ್ತು ನೀಡಿ: ಪ್ರಧಾನಿ ಮೋದಿ ಕರೆ

ಪಿಟಿಐ
Published 15 ಅಕ್ಟೋಬರ್ 2022, 17:53 IST
Last Updated 15 ಅಕ್ಟೋಬರ್ 2022, 17:53 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಕೆವಡಿಯಾ (ಗುಜರಾತ್‌) (ಪಿಟಿಐ): ‘ಹೊಸ ಕಾನೂನುಗಳನ್ನು ಸ್ಪಷ್ಟವಾದ ರೀತಿಯಲ್ಲಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬೇಕು. ಇದರಿಂದ ಬಡವರು, ಸಾಮಾನ್ಯ ಜನರಿಗೂ ಕಾನೂನು ಸುಲಭವಾಗಿ ಅರ್ಥವಾಗುತ್ತದೆ. ನ್ಯಾಯದಾನವೂ ಸುಲಭವಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಲ್ಲಿಗೆ ಸಮೀಪದ ಏಕತಾ ನಗರದಲ್ಲಿ ನಡೆಯುತ್ತಿರುವ ಎರಡು ದಿನಗಳ ‘ಕಾನೂನು ಸಚಿವರು ಮತ್ತು ಕಾನೂನು ಕಾರ್ಯದರ್ಶಿಗಳ ಅಖಿಲ ಭಾರತ ಸಾಮಾವೇಶ’ದ ಉದ್ಘಾಟನಾ ಸಮಾರಂಭದಲ್ಲಿ ವಿಡಿಯೊ ಸಂದೇಶದ ಮೂಲಕ ಪ್ರಧಾನಿ ಮಾತನಾಡಿದರು.

‘ಕಾನೂನನ್ನು ಅರ್ಥ ಮಾಡಿಕೊಳ್ಳಲು ಜನರಿಗೆ ಭಾಷೆ ಅಡ್ಡಿಯಾಗಬಾರದು’ ಎಂದು ಹೇಳಿದರು.

ADVERTISEMENT

‘ನ್ಯಾಯ ಪಡೆಯುವಲ್ಲಿ ವಿಳಂಬವಾಗುತ್ತಿರುವುದು ನಮ್ಮ ದೇಶದ ಜನರು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಸಮರ್ಥ ರಾಷ್ಟ್ರ ಮತ್ತು ಸಾಮರಸ್ಯ ಸಮಾಜಕ್ಕೆ ಸೂಕ್ಷ್ಮ ನ್ಯಾಯಾಂಗ ವ್ಯವಸ್ಥೆ ಅತ್ಯಗತ್ಯ’ ಎಂದು ಪ್ರತಿಪಾದಿಸಿದರು.

‘ನಮ್ಮ ನ್ಯಾಯಾಂಗವು ಈ ಸಮಸ್ಯೆ ಪರಿಹರಿಸಲು ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಅಮೃತ ಕಾಲದಲ್ಲಿ, ಇದನ್ನು ನಿಭಾಯಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ’ ಎಂದು ತಿಳಿಸಿದರು.

ಲೋಕ ಅದಾಲತ್‌ಗಳಂತಹ ವ್ಯವಸ್ಥೆಗಳು ನ್ಯಾಯಾಲಯಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮತ್ತು ಬಡವರಿಗೆ ಸುಲಭವಾಗಿ ನ್ಯಾಯ ದೊರೆಯುವಂತೆ ಮಾಡಲು ನೆರವಾಗಿವೆ ಎಂದು ಅವರು ಸ್ಮರಿಸಿದರು.

‘ನಮ್ಮ ಸರ್ಕಾರವು ಎಂಟು ವರ್ಷಗಳಲ್ಲಿ 1,500ಕ್ಕೂ ಹೆಚ್ಚು ಹಳೆಯ ಹಾಗೂ ಅಪ್ರಸ್ತುತ ಕಾನೂನುಗಳನ್ನು ರದ್ದುಗೊಳಿಸಿದೆ’ ಎಂದು ಮೋದಿ ತಿಳಿಸಿದರು.

‘ಕೆಲ ದೇಶಗಳು ಕಾನೂನನ್ನು ರೂಪಿಸುವಾಗಲೇ ಅದರ ಕಾಲ ಮಿತಿ ನಿರ್ಧರಿಸಲಾಗುತ್ತದೆ. ಆ ನಿಗದಿತ ದಿನಾಂಕ ಬಂದಾಗ, ಅದೇ ಕಾನೂನನ್ನು ಹೊಸ ಸಂದರ್ಭಗಳಲ್ಲಿ ಪರಿಶೀಲಿಸಲಾಗುತ್ತದೆ. ಭಾರತವೂ ಇದೇ ಮನೋಭಾವನೆಯಿಂದ ಮುನ್ನಡೆಯಬೇಕು’ ಎಂದು ಮೋದಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.