ADVERTISEMENT

ಹೊಸ ಸರ್ಕಾರದ ಹೊಸ ಆರಂಭ: ಜೋಶಿ

ಮೋದಿ ಸಂಪುಟದ ಕನ್ನಡಿಗ ಸಚಿವರು

​ಪ್ರಜಾವಾಣಿ ವಾರ್ತೆ
Published 31 ಮೇ 2019, 19:45 IST
Last Updated 31 ಮೇ 2019, 19:45 IST
ಪ್ರಹ್ಲಾದ್‌ ಜೋಶಿ
ಪ್ರಹ್ಲಾದ್‌ ಜೋಶಿ   

ನವದೆಹಲಿ: ‘ನಾವು ಐದು ವರ್ಷ ಕಾಲ ಅಧಿಕಾರದಲ್ಲಿದ್ದೆವು ಎಂಬುದನ್ನು ಮರೆತು, ಹೊಸ ಸರ್ಕಾರದ ಆರಂಭ ಎಂದು ಭಾವಿಸಿ ಕಾರ್ಯ ನಿರ್ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ’ ಎಂದು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದರು.

ಶುಕ್ರವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ ‘ಆಡಳಿತ ಪರ ಅಲೆಯಿಂದಾಗಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದಿದೆ. ಜನ ನಮ್ಮಿಂದ ಇನ್ನೂ ಹೆಚ್ಚಿನ ಕೆಲಸವನ್ನು ನಿರೀಕ್ಷಿಸಿದ್ದಾರೆ. ಜನರ ಆಶಯಕ್ಕೆ ಭಂಗ ಬಾರದಂತೆ ಕೆಲಸ ಮಾಡುತ್ತೇವೆ’ ಎಂದರು.

‘ಸಂಸದೀಯ ವ್ಯವಹಾರಗಳ ಸಚಿವನ ಕೆಲಸ ಅತ್ಯಂತ ಸವಾಲಿನದ್ದು. ಮುಂದಿನ ವಾರ ಅಧಿಕಾರ ವಹಿಸಿಕೊಳ್ಳುತ್ತೇನೆ. ಎಲ್ಲರ ವಿಶ್ವಾಸದೊಂದಿಗೆ ಕಾರ್ಯನಿರ್ವಹಿಸುತ್ತೇನೆ’ ಎಂದು ಹೇಳಿದರು.

ADVERTISEMENT

‘ಕಡಿಮೆ ದರಕ್ಕೆ ರಸಗೊಬ್ಬರ’: ‘ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುವ ಗುರಿ ಸರ್ಕಾರದ ಎದುರಿದೆ. ಈಗ ಇರುವ ದರಕ್ಕಿಂತ ಕಡಿಮೆ ದರದಲ್ಲಿ ರಸಗೊಬ್ಬರ ದೊರೆಯುವಂತೆ ನೋಡಿಕೊಳ್ಳುವೆ’ ಎಂದು ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಡಿ.ವಿ. ಸದಾನಂದಗೌಡ ತಿಳಿಸಿದರು.

ರಸಗೊಬ್ಬರದ ದರ ಕಡಿಮೆ ಆದರೆ ಮಾತ್ರ ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಆಗಲಿದೆ. ಸ್ಥಳೀಯವಾಗಿ ರಸಗೊಬ್ಬರ ಉತ್ಪಾದಿಸುವುದಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾರ್ಖಾನೆಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು. ಯೂರಿಯಾ ಕೊರತೆ ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ರೈಲ್ವೆ ಖಾತೆ ದೊರೆತಿದ್ದು ಅದೃಷ್ಟ: ‘ಮಹತ್ವದ ಖಾತೆ ದೊರೆತಿರುವುದು ನನ್ನ ಅದೃಷ್ಟ. ಪ್ರಧಾನಿಯವರು ಈ ಖಾತೆ ನೀಡುವುದರಿಂದ ಸಾಕಷ್ಟು ಸಂತಸವಾಗಿದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸುರೇಶ ಅಂಗಡಿ ಹೇಳಿದರು.

‘ಜನತೆಗೆ ರೈಲ್ವೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ. ಪ್ರಯಾಣಿಕರಿಗೆ ಮೂಲ ಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು. ಯಾವ ರೀತಿಯ ಸಮಸ್ಯೆಗಳಿವೆ ಎಂಬುದನ್ನು ಅರಿತು, ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು ಎಂದರು.

ಈ ಮೊದಲು ಈ ಖಾತೆ ನಿಭಾಯಿಸಿರುವ ಅಧಿಕಾರಿಗಳ ಸಮಾಲೋಚಿಸಿ ರಾಜ್ಯಕ್ಕೆ ಮತ್ತಷ್ಟು ಯೋಜನೆಗಳನ್ನು ಮಂಜೂರು ಮಾಡಲು ಶ್ರಮಿಸುವೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.