ADVERTISEMENT

ಪರಂಪರೆ ಜೊತೆ ಆಧುನಿಕತೆ: ಲೋಕಸಭೆ, ರಾಜ್ಯಸಭೆ ಸಭಾಂಗಣಗಳಿಗೆ ಹಲವು ಸೌಲಭ್ಯ

ಪಿಟಿಐ
Published 28 ಮೇ 2023, 21:30 IST
Last Updated 28 ಮೇ 2023, 21:30 IST
ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭ (ಪಿಟಿಐ)
ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭ (ಪಿಟಿಐ)   

ನವದೆಹಲಿ: ವೇದಕಾಲದಿಂದ ಹಿಡಿದು ಇಂದಿನವರೆಗಿನ ಭಾರತದ ಪ್ರಜಾಸತ್ತಾತ್ಮಕ ಪರಂಪರೆಯ ಕಥೆಗಳನ್ನು ಭಾನುವಾರ ಲೋಕಾರ್ಪಣೆಗೊಂಡ ನೂತನ ಸಂಸತ್ ಭವನವು ಸಾರುತ್ತಿದೆ. ಕಟ್ಟಡವು ಭಾರತದ ಸಾಂಸ್ಕೃತಿಕ ವೈಶಿಷ್ಯವನ್ನು ಮೈದಳೆದಿದೆ.

ದೇಶದ ಪ್ರಜಾಪ್ರಭುತ್ವದ ಬೆಳವಣಿಗೆಯನ್ನು ತೋರಿಸುವ ಹಲವು ವಸ್ತುಗಳನ್ನು ಕಾನ್‌ಸ್ಟಿಟ್ಯೂಷನ್‌ ಹಾಲ್‌ನಲ್ಲಿ ಪ್ರದರ್ಶಿಸಲಾಗಿದೆ. ಜೊತಗೆ ಈ ಹಾಲ್‌, ಹಿಂದೂ ಪರಂಪರೆಯ ಶ್ರೀ ಯಂತ್ರವನ್ನು ಹೋಲುತ್ತದೆ. ಇದರೊಂದಿಗೆ ಈ ಹಾಲ್‌ಗೆ ಆಧುನಿಕ ಸ್ಪರ್ಶವನ್ನೂ ನೀಡಲಾಗಿದೆ. ಭೂಮಿಯ ಪರಿಭ್ರಮಣವನ್ನು ತೋರಿಸುವ ಫೂಕೊನ ಲೋಲಕವನ್ನು ಹಾಗೂ ಡಿಜಿಟಲ್‌ ಸಂವಿಧಾನವನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ಲೋಕಸಭೆಯ ಸಭಾಂಗಣ ರಾಷ್ಟ್ರೀಯ ಪಕ್ಷಿ ನವಿಲಿನ ಥೀಮ್‌ನಲ್ಲಿದೆ. ರಾಜ್ಯಸಭೆಯ ಸಭಾಂಗಣ ರಾಷ್ಟ್ರೀಯ ಹೂವು ಕಮಲದ ಥೀಮ್‌ನಲ್ಲಿದೆ.

ADVERTISEMENT

ಅತ್ಯಾಧುನಿಕ ಮತ ವ್ಯವಸ್ಥೆ: ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅತ್ಯಾಧುನಿಕ ಮತ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆಡಿಯೊ–ವಿಡಿಯೊ ವ್ಯವಸ್ಥೆಯು ಅತ್ಯುತ್ತಮವಾಗಿದೆ.

ನೂತನ ಸಂಸತ್‌ ಭವನದ ಕಟ್ಟಡದ ಪ್ರವೇಶದಲ್ಲಿ ಮಹಾತ್ಮ ಗಾಂಧಿ, ಚಾಣಕ್ಯ, ಗಾರ್ಗಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಅಂಬೇಡ್ಕರ್‌ ಹಾಗೂ ಕೊನಾರ್ಕ್‌ನ ಸೂರ್ಯ ದೇವಾಲಯದ ಸೂರ್ಯನ ರಥದ ದೊಡ್ಡ ಗಾತ್ರದ ಕಂಚಿನ ಪ್ರತಿಮೆಯನ್ನು ಇಡಲಾಗಿದೆ.

ಉಸ್ತಾದ್‌ ಅಮ್ಜದ್‌ ಅಲಿ ಖಾನ್‌, ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾ, ಉಸ್ತಾದ್‌ ಬಿಸ್ಮಿಲ್ಲಾ ಖಾನ್‌, ಪಂಡಿತ್‌ ರವಿ ಶಂಕರ್‌ ಅವರ ಕುಟುಂಬದವರು ಭವನದ ಸಂಗೀತ ಗ್ಯಾಲರಿಗೆ ಅವರ ವಾದನಗಳನ್ನು ಕೊಟ್ಟಿದ್ದಾರೆ. ಭವನದಲ್ಲಿ ಚಿತ್ರಕಲೆ, ಲೋಹದಿಂದ ಮಾಡಿದ ಭಿತ್ತಿಚಿತ್ರಗಳು ಸೇರಿದಂತೆ ಸುಮಾರು 5 ಸಾವಿರ ಕಲಾಕೃತಿಗಳನ್ನು ಇರಿಸಲಾಗಿದೆ.

ಶೃಂಗೇರಿ ವೈದಿಕರಿಂದ ಪೂಜೆ
2020 ಡಿ. 10ರಂದು ನಡೆದ ಸಂಸತ್‌ ಭವನದ ಶಿಲಾನ್ಯಾಸದ ಸಮಾರಂಭದಲ್ಲಿ ಕರ್ನಾಟಕದ ಶೃಂಗೇರಿ ಮಠದ ವೈದಿಕರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದ್ದರು. ಭಾನುವಾರವೂ ಈ ಮಠದ ವೈದಿಕರೇ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.