ADVERTISEMENT

ಹೆಂಡತಿಯನ್ನು ಹೊರಗಡೆ ಸುತ್ತಾಡಿಸಲು ಖರ್ಚಿನ ಹಣಕ್ಕಾಗಿ 17 ಬೈಕ್ ಕದ್ದಿದ್ದವ ಬಂಧನ

ಪಿಟಿಐ
Published 23 ಡಿಸೆಂಬರ್ 2021, 10:27 IST
Last Updated 23 ಡಿಸೆಂಬರ್ 2021, 10:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಥಾಣೆ: ಇತ್ತೀಚೆಗೆ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಹೆಂಡತಿಯನ್ನು ಹೊರಗೆ ಸುತ್ತಾಡಿಸಲು ಪ್ರಯಾಣದ ಖರ್ಚಿಗಾಗಿ ಬೈಕ್‌ಗಳನ್ನು ಕದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬಂಧಿತನನ್ನು ಥಾಣೆ ಜಿಲ್ಲೆಯ ಮಂಪಡದ ದೀಪಕ್ ಸಲ್ಗಾರೆ ಎಂದು ಗುರುತಿಸಲಾಗಿದ್ದು, ಆತನಿಂದ ಸುಮಾರು ₹5 ಲಕ್ಷ ಮೌಲ್ಯದ 17 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಪಡದ ಸುತ್ತಮುತ್ತ ಬೈಕ್ ಕಳವಾಗುತ್ತಿರುವ ಬಗ್ಗೆ ಇತ್ತೀಚೆಗೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ, ರಚಿಸಲಾಗಿದ್ದ ವಿಶೇಷ ತನಿಖಾ ತಂಡವು ಕಳ್ಳರನ್ನು ಬಂಧಿಸಿದೆ ಎಂದು ಡಿಸಿಪಿ ಕಲ್ಯಾಣ್ ಎಸ್ ಬಿ ಗುಂಜಲ್ ತಿಳಿಸಿದ್ದಾರೆ.

ADVERTISEMENT

‘ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಗುಜರಿಗಳು, ಗ್ಯಾರೆಜ್ ಸೇರಿದಂತೆ ವಿವಿಧೆಡೆ ತನಿಖಾ ತಂಡ ಪರಿಶೀಲನೆ ನಡೆಸಿದೆ. ಶಂಕಿತರ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು. ದೀಪಕ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತ ಮಂಪಡ, ಕೊಲ್ಸೆವಾಡಿ, ವಿಠ್ಠಲ್‌ವಾಡಿ, ಅಂಬರ್‌ ನಾಥ್, ನರ್‌ ಪೊಲಿ, ಕೇಂದ್ರ ಮತ್ತು ಬಜಾರ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ‘ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಮದುವೆಯಾಗಿದ್ದ ಆತ ಹೆಂಡತಿಯನ್ನು ಬೇರೆ ಬೇರೆ ಊರುಗಳಿಗೆ ಕರೆದುಕೊಂಡು ಹೋಗಲು ಖರ್ಚಿನ ಹಣಕ್ಕಾಗಿ ಬೈಕ್‌ಗಳನ್ನು ಕದಿಯುತ್ತಿದ್ದದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕೆಲವು ಬೈಕ್‌ಗಳನ್ನು ಗುಜರಿಗೆ, ಮತ್ತೆ ಕೆಲವನ್ನು ಬೈಕ್ ಕ್ರೇಜ್ ಇರುವವರಿಗೆ ಮಾರಾಟ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ದೀಪಕ್ ಜೊತೆ ಇನ್ನಿತರ 5 ಮಂದಿಯನ್ನೂ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.