ADVERTISEMENT

ನ್ಯೂಟನ್, ಐನ್‍ಸ್ಟೀನ್ ವಾದ ಸುಳ್ಳು; ಕಲಾಂನ್ನು ಮೀರಿಸಲಿದ್ದಾರೆ ಸಚಿವ ಹರ್ಷವರ್ಧನ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 13:52 IST
Last Updated 5 ಜನವರಿ 2019, 13:52 IST
 ಕಣ್ಣನ್ ಜಗತಾಳ್ ಕೃಷ್ಣನ್  (ಕೃಪೆ: ಫೇಸ್‍ಬುಕ್)
ಕಣ್ಣನ್ ಜಗತಾಳ್ ಕೃಷ್ಣನ್ (ಕೃಪೆ: ಫೇಸ್‍ಬುಕ್)   

ಜಲಂಧರ್: ನ್ಯೂಟನ್‍ಗೆ ಗುರುತ್ವಾಕರ್ಷಣೆಯ ವಿಕರ್ಷಣಾ ಬಲವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ, ಹಾಗಾಗಿ ಅವರುಗುರುತ್ವಾಕರ್ಷಣೆಯ ಬಗ್ಗೆ ಇರುವ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂದು ತಮಿಳುನಾಡಿನ ಹಿರಿಯ ವಿಜ್ಞಾನಿ ಕಣ್ಣನ್ ಜಗತಾಳ್ ಕೃಷ್ಣನ್ ವಾದಿಸಿದ್ದಾರೆ.

ಶುಕ್ರವಾರ ಜಲಂಧರ್‌ನಲ್ಲಿ ನಡೆದ 106ನೇ ವಿಜ್ಞಾನ ಸಮಾವೇಶದಲ್ಲಿ ಮಾತನಾಡಿದ ಕೃಷ್ಣನ್, ನ್ಯೂಟನ್‍ನ ಲೆಕ್ಕಾಚಾರಗಳು ಎಲ್ಲ ಸರಿಯಾಗಿದ್ದವು. ಆದರೆ ಆತನ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಸಮಸ್ಯೆ ಇತ್ತು.ನಾನು ಈ ಸಿದ್ಧಾಂತಗಳನ್ನು ಸರಿಪಡಿಸಬಲ್ಲೆ.ನನ್ನ ಸಿದ್ಧಾಂತಗಳು ಸಾಬೀತು ಆದರೆ ಈಗಿರುವ ಭೌತಶಾಸ್ತ್ರದ ಬಗೆಗಿನ ಧೋರಣೆಗಳು ನಾಶವಾಗುವುದು ಎಂದು ಕೃಷ್ಣನ್ ಹೇಳಿದ್ದಾರೆ.

ಕೃಷ್ಣನ್ ಪ್ರಕಾರ, ಭೌತಶಾಸ್ತ್ರದ ಬಗ್ಗೆ ನ್ಯೂಟನ್‍ಗೆ ಹೆಚ್ಚಿನ ಅರಿವು ಇಲ್ಲ. ಅದೇ ವೇಳೆ ಅಲ್ಬರ್ಟ್ ಐನ್‍ಸ್ಟೀನ್‍, ಸಾಪೇಕ್ಷಸಿದ್ಧಾಂತದ ಮೂಲಕ ಜಗತ್ತಿನ ಹಾದಿ ತಪ್ಪಿಸಿದ್ದಾರೆ.

ADVERTISEMENT

ಅಂತರಿಕ್ಷವು ಸೂರ್ಯ ಮತ್ತು ಇತರ ಗ್ರಹಗಳಿಂದ ಭಾರವುಳ್ಳದ್ದಾಗಿದೆ. ಹಾಗಾಗಿ ಇದು ಎಲ್ಲ ಗ್ರಹಗಳನ್ನು ಸಂಕುಚಿತಗೊಳಿಸುತ್ತದೆ. ಒಂದೇ ರೀತಿಯ ಒತ್ತಡವನ್ನು ಇವುಗಳ ಮೇಲೆ ಹೇರಿರುವುದರಿಂದ ಅವು ಚಲಿಸುತ್ತವೆ. ಅಂತರಿಕ್ಷವು ಸ್ವಯಂ ಸಂಕುಚಿತಗೊಳ್ಳುವ ಸ್ವಭಾವದ್ದಾಗಿದೆ.ಇದನ್ನು ನ್ಯೂಟನ್ ಮತ್ತು ಐನ್‍ಸ್ಟೀನ್ ಅರ್ಥ ಮಾಡಿಕೊಂಡಿಲ್ಲ. ಐನ್‍ಸ್ಟೀನ್ ಜಗತ್ತನ್ನು ಸರಿಯಾದ ದಾರಿಯಲ್ಲಿ ಕರೆದೊಯ್ದಿಲ್ಲ.

ಗುರುತ್ವಾಕರ್ಷಣೆ ಬಗೆಗಿನ ನನ್ನ ಸಿದ್ಧಾಂತವನ್ನು ನಾನು ಸ್ಟೀಫನ್ ಹಾಂಕಿಂಗ್ ಸೇರಿದಂತೆ ಜಗತ್ತಿನ ಪ್ರಖ್ಯಾತ ವಿಜ್ಞಾನಿಗಳ ಜತೆ ಹಂಚಿಕೊಂಡಿದ್ದೇನೆ ಎಂದಿದ್ದಾರೆ ಕೃಷ್ಣನ್.

ಮುಂದೊಂದು ದಿನ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷ ವರ್ಧನ್ ಅವರು ಭಾರತದ ಕ್ಷಿಪಣಿ ಪಿತಾಮಹಎ.ಪಿ.ಜೆ ಅಬ್ದುಲ್ ಕಲಾಂ ಅವರಿಗಿಂತಲೂ ದೊಡ್ಡ ವಿಜ್ಞಾನಿ ಆಗಲಿದ್ದಾರೆ ಎಂದು ಕೃಷ್ಣನ್ ಹೇಳಿದ್ದಾರೆ.

ಗುರುತ್ವಾಕರ್ಷಣ ಶಕ್ತಿ ಇದೆ ಎಂದಾದರೆ ಹಿಮನದಿಗಳಿಂದ ಕರಗಿ ಬರುವ ನೀರನ್ನು ಭೂಮಿ ತನ್ನತ್ತ ಸೆಳೆಯುವುದಿಲ್ಲ ಯಾಕೆ? ಎಂದ ಕೃಷ್ಣನ್, ಯಾಕೆಂದರೆ ಗುರುತ್ವಾಕರ್ಷಣ ಶಕ್ತಿ ನಾವು ಗ್ರಹಿಸಿಕೊಂಡಂತೆ ಇಲ್ಲ ಎಂದು ವಾದಿಸಿದ್ದಾರೆ,

ಭಾಷಣದುದ್ದಕ್ಕೂ ತಮ್ಮದೇ ಸಿದ್ಧಾಂತ, ಸಾಧನೆಗಳ ಬಗ್ಗೆಮಾತನಾಡಿದ ಕೃಷ್ಣನ್, ನನ್ನ ಸಿದ್ದಾಂತಗಳು ಸಾಬೀತಾದರೆ ಗುರುತ್ವಾಕರ್ಷಣೆ ಅಲೆಗಳು ನರೇಂದ್ರ ಮೋದಿ ಅಲೆಗಳು ಎಂದು ಕರೆಯಲ್ಪಡುವುದು ಮತ್ತು ಗುರುತ್ವಾಕರ್ಷಣೆ ಲೆನ್ಸಿಂಗ್ ಎಫೆಕ್ಟ್ ಹರ್ಷ ವರ್ಧನ್ ಎಫೆಕ್ಟ್ ಎಂದು ಕರೆಯಲ್ಪಡುವುದು ಎಂದಿದ್ದಾರೆ.

ಯಾರು ಈ ವಿಜ್ಞಾನಿ?
ತಮಿಳುನಾಡಿನ ಆಲಿಯಾರ್‌ನಲ್ಲಿರುವ ವರ್ಲ್ಡ್ ಕಮ್ಯೂನಿಟಿ ಸರ್ವೀಸ್ ಸೆಂಟರ್ ನಲ್ಲಿ ಹಿರಿಯ ಸಂಶೋಧನಾ ವಿಜ್ಞಾನಿಯಾಗಿದ್ದಾರೆ ಕಣ್ಣನ್ ಜಗತಾಳ್ ಕೃಷ್ಣನ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.