ADVERTISEMENT

4–5 ತಿಂಗಳಲ್ಲಿ 2.25 ಕೋಟಿ ಅನರ್ಹ ಫಲಾನುಭವಿಗಳ ಕಡಿತ: ಆಹಾರ ಇಲಾಖೆ ಕಾರ್ಯದರ್ಶಿ

ಆಹಾರ ಕಾಯ್ದೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಕಾನೂನು ಕ್ರಮ

ಪಿಟಿಐ
Published 18 ನವೆಂಬರ್ 2025, 15:59 IST
Last Updated 18 ನವೆಂಬರ್ 2025, 15:59 IST
ಪಡಿತರ ಚೀಟಿ
(ಸಾಂದರ್ಭಿಕ ಚಿತ್ರ)
ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)   

ನವದೆಹಲಿ: ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ (ಎನ್‌ಎಫ್‌ಎಸ್‌ಎ) ಕಳೆದ 4ರಿಂದ 5 ತಿಂಗಳಲ್ಲಿ ದೇಶದಾದ್ಯಂತ 2.25 ಕೋಟಿ ಅನರ್ಹ ಫಲಾನುಭವಿಗಳನ್ನು ತೆಗೆದು ಹಾಕಲಾಗಿದೆ’ ಎಂದು ಆಹಾರ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಡವರಿಗೆ ನೆರವಾಗುವ ದೃಷ್ಟಿಯಿಂದ ದೇಶದಾದ್ಯಂತ ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ 5 ಕೆ.ಜಿ ಆಹಾರ ಧಾನ್ಯ (ಗೋಧಿ, ಅಕ್ಕಿ) ಉಚಿತವಾಗಿ ವಿತರಿಸಲಾಗುತ್ತಿದೆ. ನಾಲ್ಕು ಚಕ್ರಗಳ ಸ್ವಂತ ವಾಹನ ಹೊಂದಿರುವವರು, ಮಾಸಿಕ ಆದಾಯವು ಮಿತಿಗಿಂತ ಹೆಚ್ಚಿರುವುದು, ಕಂಪನಿಗಳ ನಿರ್ದೇಶಕರನ್ನು ಎನ್‌ಎಫ್‌ಎಸ್‌ಎ ಫಲಾನುಭವಿ ಪಟ್ಟಿಯಿಂದ ಹೊರಗಿಟ್ಟು, ನೈಜ ಫಲಾನುಭವಿಗಳಿಗಷ್ಟೇ ಲಾಭ ತಲುಪಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

‘ಕಳೆದ ನಾಲ್ಕೈದು ತಿಂಗಳಲ್ಲಿ 2.5 ಕೋಟಿ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಅದೇ ರೀತಿ, ಅರ್ಹ ಫಲಾನುಭವಿಗಳನ್ನು ಹೊಸತಾಗಿ ಸೇರ್ಪಡೆ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿದೆ’ ಎಂದು ಆಹಾರ ಇಲಾಖೆ ಕಾರ್ಯದರ್ಶಿ ಸಂಜೀವ್‌ ಛೋಪ‍್ರಾ ತಿಳಿಸಿದ್ದಾರೆ.

ADVERTISEMENT

2013ರಲ್ಲಿ ಸಂಸತ್‌ನಲ್ಲಿ ಅಂಗೀಕಾರಗೊಂಡ ಎನ್‌ಎಫ್‌ಎಸ್‌ಎ ಕಾಯ್ದೆಯ ಪ್ರಕಾರ, ಗ್ರಾಮೀಣ ಭಾಗದ ಶೇಕಡ 75 ಹಾಗೂ ನಗರ ಭಾಗದ ಶೇಕಡಾ 50 ರಷ್ಟು ನಾಗರಿಕರು ಇದರ ಲಾಭ ಪಡೆಯುತ್ತಿದ್ದಾರೆ. 2011ರ ಜನಗಣತಿ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಅಂದರೆ, 81.35 ಕೋಟಿ ನಾಗರಿಕರು ಎನ್‌ಎಫ್‌ಎಸ್‌ಎ ಫಲಾನುಭವಿಗಳಾಗಿದ್ದಾರೆ.

ದೇಶದಾದ್ಯಂತ 19 ಕೋಟಿ ಪಡಿತರ ಚೀಟಿಗಳನ್ನು ನೀಡಲಾಗಿದ್ದು, 5 ಲಕ್ಷ  ಪಡಿತರ ಅಂಗಡಿಗಳ ಮೂಲಕ ಆಹಾರ ಧಾನ್ಯ ವಿತರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.