
ನವದೆಹಲಿ: ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಅಂತರರಾಷ್ಟ್ರೀಯ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್ ನಿರ್ಮಾಣದ ಪ್ರಸ್ತಾವಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅನುಮತಿ ನೀಡಿದೆ. ಪರಿಸರ ಅನುಮತಿ (ಇ.ಸಿ) ಕೊಡುವ ಮುನ್ನ ಸುರಕ್ಷತಾ ಕ್ರಮಗಳಿಗೂ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದೆ.
ಪ್ರಸ್ತಾವಿತ ಟರ್ಮಿನಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಆಕ್ಷೇಪಣೆ ಕುರಿತಾದ ಅರ್ಜಿ ವಿಚಾರಣೆ ನಡೆಸಿ ಕೋಲ್ಕತ್ತದಲ್ಲಿರುವ ಪೂರ್ವ ವಲಯದ ಪೀಠದ ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಪ್ರಕಾಶ್ ಶ್ರೀ ವಾತ್ಸವ ಅವರು ಸೋಮವಾರ ಈ ಆದೇಶ ಹೊರಡಿಸಿದ್ದಾರೆ. ಯೋಜನೆಯು ಟೌನ್‌ಶಿಪ್ ಹಾಗೂ 450 ಮೆಗಾವಾಟ್ ಅನಿಲ ಹಾಗೂ ಸೌರ ಆಧಾರಿತ ವಿದ್ಯುತ್ ಘಟಕವನ್ನು ಒಳಗೊಂಡಿರಲಿದೆ.
ಟರ್ಮಿನಲ್ ನಿರ್ಮಾಣದಿಂದ ದ್ವೀಪ ಕರಾವಳಿ ವಲಯ ಅಧಿಸೂಚನೆ (ಐಸಿಆರ್‌ಝ್) ಉಲ್ಲಂಘನೆಯಾಗಲಿದೆ ಎಂದು ಆರೋಪಿಸಿ ಇದಕ್ಕೂ ಮುನ್ನ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದು ಯೋಜನೆಗೆ ಸಂಬಂಧಿಸಿದ ಎರಡನೇ ಹಂತದ ಮೊಕದ್ದಮೆಯಾಗಿತ್ತು. 2023ರ ಏಪ್ರಿಲ್‌ನಲ್ಲಿ ಯೋಜನೆಗೆ ಪರಿಸರ ಅನುಮತಿಯನ್ನು ಎನ್‌ಜಿಟಿ ಎತ್ತಿ ಹಿಡಿದಿತ್ತು. ಅರ್ಜಿದಾರರು ಎತ್ತಿದ್ದ ನಿರ್ದಿಷ್ಟ ಕಾಳಜಿಯ ಕುರಿತು ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಮಿತಿ (ಎಚ್‌ಪಿಸಿ)ಯನ್ನೂ ರಚಿಸಿತ್ತು.
‘ಪರಿಸರ ಅನುಮತಿಗೆ ಸಂಬಂಧಿಸಿ ಷರತ್ತುಗಳನ್ನು ವಿಧಿಸುವ ಮೂಲಕ ಹೆಚ್ಚುವರಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಮೊದಲ ಸುತ್ತಿನ ಮೊಕದ್ದಮೆಯ ವಿಚಾರಣೆಯಲ್ಲಿ ಪರಿಸರ ಅನುಮತಿಗೆ ಸಂಬಂಧಿಸಿದ ಮಧ್ಯಪ್ರವೇಶಿಸಲು ನ್ಯಾಯಮಂಡಳಿ ನಿರಾಕರಿಸಿತ್ತು. ಅರ್ಜಿಯಲ್ಲಿ ಎತ್ತಿರುವ ಉಳಿದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಯೋಜನೆಯು ಜಾರಿಯಾಗುವುದು ‘ಕಾರ್ಯತಂತ್ರದ ಪ್ರಮುಖ’ ಎಂದು ಉನ್ನತ ಮಟ್ಟದ ಸಮಿತಿ (ಎಚ್‌ಪಿಸಿ) ಕೂಡ ಪರಿಗಣಿಸಿದ್ದು, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದು ನಮಗೆ ಯಾವುದೇ ಉತ್ತಮವಾದ ಆಧಾರಗಳು ಸಿಗುವುದಿಲ್ಲ’ ಎಂದು ನ್ಯಾಯಮಂಡಳಿ ತಿಳಿಸಿದೆ.
ಇದರ ಹೊರತಾಗಿಯೂ, ‘ಸಂಬಂಧಿತ ಪ್ರಾಧಿಕಾರಗಳು ಪರಿಸರ ಅನುಮತಿಗೆ ಸಂಬಂಧಿಸಿದ ಷರತ್ತುಗಳನ್ನು ಕಠಿಣವಾಗಿ ಜಾರಿಗೊಳಿಸುವಂತೆ ನೋಡಿಕೊಳ್ಳಬೇಕು’ ಎಂದು ನ್ಯಾಯಮಂಡಳಿಯು ಒತ್ತಿ ಹೇಳಿದೆ.
‘ಕಾರ್ಯತಂತ್ರದ ಭಾಗವಾಗಿ ಯೋಜನೆಯೂ ಜಾರಿಗೊಳ್ಳುವುದು ಅತ್ಯಗತ್ಯವಾಗಿರುವ ಕಾರಣ, ಯೋಜನೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಐಸಿಆರ್‌ಝಡ್ ಅಧಿಸೂಚನೆಯನ್ನು ನಿರ್ಲಕ್ಷಿಸಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಪರಿಸರ ಅನುಮತಿಯಲ್ಲಿ ವಿಧಿಸಿದ ನಿರ್ದಿಷ್ಟ ಕಠಿಣ ಷರತ್ತುಗಳು:
ಸಮುದ್ರ ಆಮೆಗಳ ರಕ್ಷಣೆ, ನಿಕೋಬಾರ್ ಮೆಗಾಪೊಡ್ ಹಕ್ಕಿಗಳ ರಕ್ಷಣೆ, ಉಪ್ಪು ನೀರಿನ ಮೊಸಳೆ, ಸ್ಥಳೀಯ ಸಸ್ಯವರ್ಗಗಳ ರಕ್ಷಣೆ, ನಿಕೋಬಾರ್ ಉದ್ದ ಬಾಲದ ಮಂಗಗಳು, ನಿಕೋಬಾರ್ ಏಡಿಗಳು, ನಿಕೋಬಾರ್ ದ್ವೀಪದ ಸ್ಥಳೀಯ ಹಕ್ಕಿಗಳು, ಮ್ಯಾಂಗ್ರೋವ್ ಕಾಡುಗಳ ಪುನರ್ ಸ್ಥಾಪನೆ, ಹವಳದ ಸ್ಥಳಾಂತರ, ಶೋಂಪೆನ್ ಹಾಗೂ ನಿಕೋಬಾರಿ ದ್ವೀಪಗಳ ಬುಡಕಟ್ಟು ಸಮುದಾಯದವರ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ. ದ್ವೀಪದ ಕರಾವಳಿ ರಕ್ಷಣೆ, ಆಮೆ ಹಾಗೂ ಹಕ್ಕಿಗಳ ಗೂಡು, ಮೊಟ್ಟೆಗಳ ರಕ್ಷಣೆ ನಿಟ್ಟಿನಲ್ಲಿ ಮರಳಿನ ಕಡಲ ತೀರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.ಗ್ರೇಟ್ ನಿಕೋಬಾರ್ ದ್ವೀಪಕ್ಕೆ ಅನುಮತಿ ನೀಡಿದ ಎನ್‌ಜಿಟಿ ನಿರ್ಧಾರವು ತೀವ್ರ ನಿರಾಸದಾಯಕವಾಗಿದೆ. ಯೋಜನೆ ಪರಿಸರದ ಮೇಲೆ ಭಾರಿ ಹಾನಿ ಉಂಟುಮಾಡಲಿದೆ ಎಂಬುದಕ್ಕೆ ನಿರ್ದಿಷ್ಟ ಪುರಾವೆಗಳಿವೆ ಜೈರಾಮ್ ರಮೇಶ್ ಕಾಂಗ್ರೆಸ್ ಸಂಸದ ಪರಿಸರ ಖಾತೆ ಮಾಜಿ ಸಚಿವ
ಗ್ರೇಟ್ ನಿಕೋಬಾರ್ ದ್ವೀಪಕ್ಕೆ ಅನುಮತಿ ನೀಡಿದ ಎನ್‌ಜಿಟಿ ನಿರ್ಧಾರವು ತೀವ್ರ ನಿರಾಸದಾಯಕವಾಗಿದೆ. ಯೋಜನೆ ಪರಿಸರದ ಮೇಲೆ ಭಾರಿ ಹಾನಿ ಉಂಟುಮಾಡಲಿದೆ ಎಂಬುದಕ್ಕೆ ನಿರ್ದಿಷ್ಟ ಪುರಾವೆಗಳಿವೆಜೈರಾಮ್ ರಮೇಶ್ ಕಾಂಗ್ರೆಸ್ ಸಂಸದ ಪರಿಸರ ಖಾತೆ ಮಾಜಿ ಸಚಿವ
ದುರದೃಷ್ಟಕರ ನಿರಾಶಾದಾಯಕ
ತಜ್ಞರ ಆತಂಕ ನವದೆಹಲಿ: ಗ್ರೇಟ್ ನಿಕೋಬಾರ್ ಯೋಜನೆಗೆ ಎನ್‌ಜಿಟಿ ಅನುಮತಿ ನೀಡಿದ ಕ್ರಮವನ್ನು ಪರಿಸರವಾದಿಗಳು ದುರದೃಷ್ಟಕರ ನಿರಾಸದಾಯಕ ಎಂದು ಬಣ್ಣಿಸಿದ್ದಾರೆ. ಇದು ಅಲ್ಲಿನ ಪರಿಸರದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ‘ಎನ್‌ಜಿಟಿ ಅನುಮೋದನೆಗೆ ವಿಧಿಸಿರುವ ಷರತ್ತುಗಳು ದೀರ್ಘಾವಧಿಯಲ್ಲಿ ಪರಿಣಾಮಗಳನ್ನು ತಪ್ಪಿಸಲು ಯಾವುದೇ ಸಹಾಯ ಮಾಡುವುದಿಲ್ಲ. ಈ ವಿಚಾರ ಈಗಲೂ ಕಲ್ಕತ್ತ ಹೈಕೋರ್ಟ್‌ನಲ್ಲಿದ್ದು ಭರವಸೆಯ ಏಕೈಕ ದಾರಿದೀಪವಾಗಿದೆ’ ಎಂದು ಮಾಜಿ ಪರಿಸರ ಸಚಿವ ಜೈರಾಮ್ ರಮೇಶ್ ತಿಳಿಸಿದ್ದಾರೆ. ‘ಎನ್‌ಜಿಟಿ ನಿರ್ಧಾರವು ದುರದೃಷ್ಟಕರ. ನಾವು ಈ ಕುರಿತು ಕಲ್ಕತ್ತ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲಿದೆ ಎಂದು ಆಶಾಭಾವ ಹೊಂದಿದ್ದೇವೆ’ ಎಂದು ಮುಂಬೈ ಮೂಲದ ಸ್ವಯಂಸೇವಾ ಸಂಸ್ಥೆ (ಎನ್‌ಜಿಒ) ‘ಕನ್ಸರ್ವೇಷನ್ ಆ್ಯಕ್ಸನ್ ಟ್ರಸ್ಟ್‌ನ ಕಾರ್ಯಕಾರಿ ಟ್ರಸ್ಟಿ ದೇಬಿ ಗೋಯೆಂಕಾ ತಿಳಿಸಿದ್ದಾರೆ. ‘ಎನ್‌ಜಿಟಿ ನಿರ್ಧಾರವು ನಂಬಲು ಅಸಾಧ್ಯ ಸ್ವೀಕಾರಾರ್ಹವಲ್ಲ’ ಎಂದು ರಾಜ್ಯಸಭೆಯ ಮಾಜಿ ಸಂಸದ ಜವಾಹರ್ ಸಿಕಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.