ADVERTISEMENT

ಮಾರ್ಗಸೂಚಿ ಜಾರಿಗೆ ಎನ್‌ಜಿಟಿ ಸೂಚನೆ

ನೀರಾವರಿ ಉದ್ದೇಶಕ್ಕೆ ಕೈಗಾರಿಕಾ ತ್ಯಾಜ್ಯ ಬಳಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2021, 22:03 IST
Last Updated 26 ಮೇ 2021, 22:03 IST

ನವದೆಹಲಿ: ಕೃಷಿ ಹಾಗೂ ತೋಟಗಾರಿಕೆ ಜಮೀನಿನಲ್ಲಿ ನೀರಾವರಿ ಉದ್ದೇಶದಿಂದ ಕೈಗಾರಿಕೆಗಳ ದ್ರವತ್ಯಾಜ್ಯವನ್ನು ಬಳಸಿಕೊಳ್ಳುವ ಸಂಬಂಧ ಮಾರ್ಗಸೂಚಿ ಜಾರಿಗೊಳಿಸವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿದೆ.

ಈ ಕುರಿತು 2019ರ ಸೆಪ್ಟೆಂಬರ್‌ನಲ್ಲಿ ತಾನು ನೀಡಿರುವ ನಿರ್ದೇಶನವನ್ನು ಕಾರ್ಯರೂಪಕ್ಕೆ ತರುವಂತೆಯೂ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಹಸಿರು ಪೀಠವು ಮಂಡಳಿಗೆ ಸೂಚಿಸಿದೆ.

ಅಂತರ್ಜಲದ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡುವ ಕೈಗಾರಿಕೆಗಳ ಸಂಸ್ಕರಿಸಿದ ತ್ಯಾಜ್ಯವನ್ನು ನೀರಾವರಿ ಉದ್ದೇಶಕ್ಕಾಗಿ ಹರಿಸಲು ಸಾಕಷ್ಟು ಭೂಮಿ ಹೊಂದಿರದ ಯಾವುದೇ ಕೈಗಾರಿಕೆಗೂ ಅನುಮತಿ ಇಲ್ಲ ಎಂದು ತಿಳಿಸಿದ್ದ ಪೀಠವು, ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡು, ನಿಗದಿತ ಮಾನದಂಡಗಳಿಗೆ ಅನುಗುಣವಾಗಿಯೇ ಮಾರ್ಗಸೂಚಿ ಹೊರಡಿಸುವಂತೆ ಸೂಚಿಸಿದೆ.

ADVERTISEMENT

ಮಾರ್ಗಸೂಚಿ ಜಾರಿಗ ಮುನ್ನ ಕೇಂದ್ರ ಮಂಡಳಿಯು ಆಯಾ ರಾಜ್ಯಗಳ ಮಂಡಳಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಕಾನೂನಿಗೆ ಅನುಸಾರ ಕ್ರಮ ಕೈಗೊಳ್ಳಬಹುದು ಎಂದೂ ತಿಳಿಸಲಾಗಿದೆ.

ಉತ್ತರ ಪ್ರದೇಶದಲ್ಲಿನ ಕೆಲವು ಕಸಾಯಿ ಖಾನೆಗಳ ದ್ರವ ತ್ಯಾಜ್ಯವನ್ನು ಚರಂಡಿಗೆ ಹಾಗೂ ಕೃಷಿ, ತೋಟಗಾರಿಕೆ ಜಮೀನಿಗೆ ಹರಿಬಿಡುವ ಮೂಲಕ ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾದ ಆದೇಶದ ಜಾರಿ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿ ಹಸಿರು ಪೀಠವು ಈ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.