ADVERTISEMENT

ಯಮುನೆಯ ಪ್ರವಾಹ ಸ್ಥಳ ಪರಿಶೀಲಿಸಲು ಎನ್‌ಜಿಟಿ ಆದೇಶ

ಪಿಟಿಐ
Published 11 ಮಾರ್ಚ್ 2019, 15:20 IST
Last Updated 11 ಮಾರ್ಚ್ 2019, 15:20 IST
   

ನವದೆಹಲಿ: ಆಗ್ರಾದಲ್ಲಿನ ಯುಮುನಾ ನದಿಯ ಪ್ರವಾಹಪೀಡಿತ ಸ್ಥಳವನ್ನು ಪರಿಶೀಲಿಸಿ ನಾಲ್ಕು ವಾರಗಳೊಳಗೆ ವರದಿ ಸಲ್ಲಿಸುವಂತೆ ‘ನವಾಮಿ ಗಂಗೆ’ ಯೋಜನೆ ನಿರ್ದೇಶಕರು ಮತ್ತು ಹೈಡ್ರಾಲಜಿ ನ್ಯಾಷನಲ್ ಇನ್ಸ್ಟಿಟ್ಯೂಟ್‌ನ ಮಹಾನಿರ್ದೇಶಕರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸೋಮವಾರ ಗಡುವು ನೀಡಿದೆ.

ನ್ಯಾಯಮೂರ್ತಿ ಆರ್‌.ಎಸ್‌.ರಾಥೋಡ್‌ ಅವರ ನೇತೃತ್ವದ ಪೀಠವು, ಇದಕ್ಕೆ ಸಂಬಂಧಿಸಿದ ಹಿಂದಿನ ವರದಿಗಳು ಅಸಮಪರ್ಕವಾಗಿರುವುದಷ್ಟೇ ಅಲ್ಲದೆ, ಸಂಬಂಧಿಸಿದವರ ವಿರುದ್ಧ ಗಂಭೀರ ಆಕ್ಷೇಪಣೆಗಳೂ ಎದ್ದಿವೆ ಎಂದು ಹೇಳಿದೆ.

ನವಾಮಿ ಗಂಗೆಯ ನಿರ್ದೇಶಕ ಮತ್ತು ರೂರ್ಕಿಯ ಹೈಡ್ರಾಲಜಿ ನ್ಯಾಷನಲ್ ಇನ್ಸ್ಟಿಟ್ಯೂಟ್‌ನ ಮಹಾನಿರ್ದೇಶಕರು ಈ ವಿಷಯಕ್ಕೆ ನಾಮನಿರ್ದೇಶನಗೊಂಡಿರುವ ಅಧಿಕಾರಿಗಳಾಗಿದ್ದಾರೆ. ಇವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಾಲಮಿತಿಯೊಳಗೆ ವರದಿ ಸಲ್ಲಿಸಬೇಕು. ಆಗ್ರಾದಲ್ಲಿ ನದಿ ಪ್ರವಾಹ ಪ್ರದೇಶದ ಗಡಿರೇಖೆಯನ್ನು ಮತ್ತು ಕಟ್ಟಡಗಳು ನಿರ್ಮಾಣವಾಗಿರುವ ಜಾಗವನ್ನು ಸ್ಪಷ್ಟವಾಗಿ ಗುರುತಿಸಿ ವರದಿಯಲ್ಲಿ ಪ್ರತಿಬಿಂಬಿಸಬೇಕು’ ಎಂದು ನ್ಯಾಯಮಂಡಳಿ ಹೇಳಿದೆ.

ADVERTISEMENT

ನದಿಯ ಪ್ರವಾಹ ಪ್ರದೇಶದಲ್ಲಿ ಹಲವಾರು ಕಟ್ಟಡಗಳನ್ನು ನಿರ್ಮಿಸಲಾಗಿದೆ ಮತ್ತು ಕೆಲವು ಕಡೆಗಳಲ್ಲಿ ಕಟ್ಟಡ ಇರುವ ಜಾಗವೂ ಸ್ವತಃ ನದಿಯೇ ಆಗಿದೆ ಎಂದು ಆರೋಪಿಸಿ ಉಮಾಶಂಕರ್‌ ಪತ್ವಾ ಮತ್ತು ಶಬಿ ಹೈದರ್‌ ಜಾಫ್ರಿ ಸಲ್ಲಿಸಿರುವ ಅರ್ಜಿಯನ್ನು ಅವರು ವಿಚಾರಣೆ ನಡೆಸಿದರು. ಪ್ರಕರಣದ ವಿಚಾರಣೆಯನ್ನು ಏಪ್ರಿಲ್‌ 12ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.